ADVERTISEMENT

ಕಾರ್ಮಿಕರ ವಜಾ: ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST
ಕಾರ್ಮಿಕರ ವಜಾ: ಕರವೇ ಪ್ರತಿಭಟನೆ
ಕಾರ್ಮಿಕರ ವಜಾ: ಕರವೇ ಪ್ರತಿಭಟನೆ   

ಯಲಹಂಕ: ರಾಜಾನುಕುಂಟೆ ಬಳಿಯಿರುವ ಕೆಎಂಎಫ್ ಪಶು ಆಹಾರ ತಯಾರಿಕಾ ಘಟಕದ ಮೂವರು  ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿರುವ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಯಲಹಂಕ ಹಾಗೂ ಬ್ಯಾಟರಾಯನಪುರ ಘಟಕದ ಕಾರ್ಯಕರ್ತರು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕರವೇ ಯಲಹಂಕ ಘಟಕದ ಅಧ್ಯಕ್ಷ ಸತೀಶ್, `ಸುಮಾರು 20 ವರ್ಷಗಳಿಂದ ಮೂಟೆಹೊರುವ ಕೆಲಸ ಮಾಡಿಕೊಂಡು ಬಂದಿದ್ದ ಕೂಲಿ ಕಾರ್ಮಿಕರಾದ ಮುನಿಯಪ್ಪ, ಪ್ರಕಾಶ್ ಮತ್ತು ಸುರೇಶ್ ಅವರು, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯ ನೀಡುವಂತೆ ಆಗ್ರಹಿಸಿದ್ದಾರೆ. ಮಧ್ಯಾಹ್ನ 12 ಗಂಟೆಯಾದರೂ ಕೆಲಸ ನೀಡದ ಬಗ್ಗೆ ಆಡಳಿತ ಮಂಡಳಿ ಸದಸ್ಯರನ್ನು ಪ್ರಶ್ನಿಸಿದ್ದಾರೆ ಈ ಹಿನ್ನೆಲೆಯಲ್ಲಿ ಮೂವರನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ' ಎಂದು ಆರೋಪಿಸಿದರು.

ಸೇವೆಯಿಂದ ವಜಾಗೊಳಿಸಿದ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಘಟಕದ ಮುಂಭಾಗದಲ್ಲಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಘಟಕದಲ್ಲಿ ಸೀಡ್ಸ್ ತಯಾರಿಕೆಗೆ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗುತ್ತಿದೆ ಎನ್ನಲಾದ  ವಿಚಾರವನ್ನು  ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ನಮ್ಮನ್ನು ಕೆಲಸದಿಂದ ತೆಗೆಯಲಾಯಿತು ದು ವಜಾಗೊಂಡಿರುವ ಕಾರ್ಮಿಕರು ಆರೋಪಿಸಿದರು.

ಆರೋಪವನ್ನು ತಳ್ಳಿಹಾಕಿದ ಘಟಕದ ಪ್ರಧಾನ ವ್ಯವಸ್ಥಾಪಕ ಅಶೋಕ್‌ಕುಮಾರ್, ಕಾರ್ಮಿಕರನ್ನು ಯಾವುದೇ ದುರುದ್ದೇಶ ಇಟ್ಟುಕೊಂಡು ಕೆಲಸದಿಂದ ವಜಾಗೊಳಿಸಿಲ್ಲ. ಅವರ ನಡವಳಿಕೆ ಸರಿಯಿಲ್ಲದ ಕಾರಣ, ಅವರನ್ನು ಕೆಲಸಕ್ಕೆ ಕಳಿಸುವುದು ಬೇಡವೆಂದು ಗುತ್ತಿಗೆದಾರರಿಗೆ ತಿಳಿಸಿದ್ದೆವು. ಅದರಂತೆ ಗುತ್ತಿಗೆದಾರರು ಅವರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಘಟಕದ ಹೊರಗೆ ಮತ್ತು ಒಳಗೆ ಯಾವುದೇ ವಾಹನಗಳು ಸಂಚರಿಸದಂತೆ ತಡೆದು, ಸುಮಾರು ನಾಲ್ಕು ಗಂಟೆಗೂ ಹೆಚ್ಚುಕಾಲ ಪ್ರತಿಭಟನೆಯನ್ನು ನಡೆಸಿದ ಪ್ರತಿಭಟನಾಕಾರರ ಮನವಿಯನ್ನು ಆಲಿಸಿದ ಗುತ್ತಿಗೆದಾರರಾದ ವಿಶ್ವನಾಥ್ ಅವರು, ಸೇವೆಯಿಂದ ತೆಗೆದಿರುವ ಕಾರ್ಮಿಕರಿಂದ ಕೆಲವು ಷರತ್ತುಗಳನ್ನು ಒಳಗೊಂಡ ಅರ್ಜಿಯನ್ನು ಬರೆಸಿಕೊಂಡು ಸೋಮವಾರದಿಂದ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
ಕರವೇ ಬ್ಯಾಟರಾಯನಪುರ ಘಟಕದ ಅಧ್ಯಕ್ಷ ಸುರೇಶ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.