ADVERTISEMENT

ಕುಲಾಧಿಪತಿ ರಾಜ್ಯಪಾಲರಿಗೇ ಆಹ್ವಾನವಿಲ್ಲ

ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 20:04 IST
Last Updated 5 ಮಾರ್ಚ್ 2018, 20:04 IST
ಪತ್ರಿಕಾಗೋಷ್ಠಿ ಉದ್ದೇಶಿಸಿ ಜಾಫೆಟ್‌ ಮಾತನಾಡಿದರು. ರಾಮಚಂದ್ರ ಗೌಡ ಇದ್ದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಜಾಫೆಟ್‌ ಮಾತನಾಡಿದರು. ರಾಮಚಂದ್ರ ಗೌಡ ಇದ್ದರು.   

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಇದೇ 7ರಂದು ವಿಧ್ಯುಕ್ತವಾಗಿ ಉದ್ಘಾಟನೆಯಾಗಲಿದೆ. ಆದರೆ, ಕುಲಾಧಿಪತಿಯಾದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೇ ಈ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ.

‘ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಉದ್ಘಾಟನಾ ಸಮಾರಂಭ ನಡೆಸಲು ಉದ್ದೇಶಿಸಿದ್ದೆವು. ತರಾತುರಿಯಲ್ಲಿ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಿದ್ದರಿಂದ ರಾಜ್ಯಪಾಲರನ್ನು ಆಹ್ವಾನಿಸಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಅಧಿಕಾರಿಗಳು.

ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ವಿಶ್ವವಿದ್ಯಾಲಯ ಸೋಮವಾರ  ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ. ಎಸ್‌.ಜಾಫೆಟ್‌  ಹಾಗೂ ಕುಲಸಚಿವ ಎಂ.ರಾಮಚಂದ್ರ ಗೌಡ  ಈ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಿದರು.

ADVERTISEMENT

‘ಕಾರ್ಯಕ್ರಮದ ಸಮಯ ನಿಗದಿಪಡಿಸಲು ರಾಜ್ಯಪಾಲರಿಗೆ ಎರಡು ತಿಂಗಳ ಮುಂಚಿತವಾಗಿಯೇ ಕೋರಿಕೆ ಸಲ್ಲಿಸಬೇಕು. ಕಾರ್ಯಕ್ರಮ ಮಾಡಬೇಕೆಂದು ಯೋಜಿಸಿ, ಒಂದು ತಿಂಗಳಾಗಿದೆಯಷ್ಟೇ. ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ 10 ದಿನಗಳ ಹಿಂದಷ್ಟೇ ಒಪ್ಪಿಗೆ ಸೂಚಿಸಿದರು’ ಎಂದು ಕುಲಸಚಿವರು ಸಮರ್ಥಿಸಿಕೊಂಡರು.

‘ಇದೊಂದು ಸರ್ಕಾರಿ ವಿಶ್ವವಿದ್ಯಾಲಯ. ಹೊಸದಾಗಿ ಪ್ರಾರಂಭಗೊಂಡಿರುವ ಇದಕ್ಕೆ ಅನೇಕ ರಾಜಕೀಯ ಮುಖಂಡರು ನೆರವು ನೀಡಿದ್ದಾರೆ. ಅವರನ್ನು ಆಹ್ವಾನಿಸಲೇ ಬೇಕು. ಜೂನ್‌ನಲ್ಲಿ ಕೋರ್ಸ್‌ಗಳು ಪ್ರಾರಂಭವಾಗಲಿದ್ದು, ಅದನ್ನು ರಾಜ್ಯಪಾಲರಿಂದ ಉದ್ಘಾಟನೆ ಮಾಡಿಸಲಾಗುವುದು’ ಎಂದು ಕುಲಪತಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಗೀತೆ, ನೂತನ ಲಾಂಛನ, ಮುನ್ನೋಟ ಹಾಗೂ ವೆಬ್‌ಸೈಟನ್ನು ಬಿಡುಗಡೆಗೊಳಿಸಲಾಗುತ್ತದೆ. ಸೆಂಟ್ರಲ್‌ ಕಾಲೇಜಿನ ಗೋಪುರ ಗಡಿಯಾರಕ್ಕೂ ಚಾಲನೆ ನೀಡಲಾಗುತ್ತದೆ ಎಂದರು.

ವಿಶ್ವವಿದ್ಯಾಲಯದ ಎಲ್ಲ ಸಂಯೋಜಿತ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಕೈಜೋಡಿಸಿವೆ. ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾರಂಭಕ್ಕೆ ಸುಮಾರು ₹25 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದರು.

‘ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ರಾಜಕೀಯ ಮುಖಂಡರ ಹೆಸರುಗಳಿಂದ ತುಂಬಿಹೋಗಿದೆ. ಶಿಷ್ಟಾಚಾರಕ್ಕಾದರೂ ರಾಜ್ಯಪಾಲರ ಹೆಸರನ್ನು ಮುದ್ರಿಸಬೇಕಿತ್ತಲ್ಲವೇ. ವಿಶ್ವವಿದ್ಯಾಲಯ ಅಧಿಕೃತವಾಗಿ ಪ್ರತ್ಯೇಕಗೊಂಡು ಎಂಟು ತಿಂಗಳಾಗಿವೆ. ಉದ್ಘಾಟನೆಗೆ ಈಗ ಏಕೆ ತರಾತುರಿ. ಹೊಸ ವಿಶ್ವವಿದ್ಯಾಲಯದ ಆರಂಭಕ್ಕೆ ಕುಲಾಧಿಪತಿಗಳೇ ಇರದಿದ್ದರೆ ಅದು ಶಿಷ್ಟಾಚಾರವನ್ನು ಮುರಿದಂತಾಗುವುದಿಲ್ಲವೇ’ ಎಂದು ಸುದ್ದಿಗಾರರು ಪ್ರಶ್ನಿಸಿದರು. ಈ ಪ್ರಶ್ನೆಗಳಿಗೆ ಅವರಿಬ್ಬರೂ ಉತ್ತರಿಸಲಿಲ್ಲ.

ಸಂಯೋಜನೆ ಕೋರಿ 17 ಅರ್ಜಿ 
ವಿಶ್ವವಿದ್ಯಾನಿಲಯಕ್ಕೆ 239 ಕಾಲೇಜುಗಳು ಸಂಯೋಜನೆಗೊಂಡಿವೆ. ಈ ಬಾರಿ 17 ಕಾಲೇಜುಗಳು ಸಂಯೋಜನೆ ಕೋರಿ ಅರ್ಜಿ ಸಲ್ಲಿಸಿವೆ. ಸ್ಥಳೀಯ ವಿಚಾರಣಾ ಸಮಿತಿಗಳು (ಎಲ್‌ಐಸಿ) ಸ್ಥಳ ಪರಿಶೀಲನೆ ನಡೆಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರೊ.ಜಾಫೆಟ್‌ ಹೇಳಿದರು.

‘20 ಹೊಸ ವಿಭಾಗಗಳನ್ನು ಪ್ರಾರಂಭಿಸಲು ಅವಕಾಶ ಕೋರಿ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇವೆ. ಅವುಗಳಿಗಿನ್ನೂ ಅನುಮತಿ ದೊರೆತಿಲ್ಲ. ಈಗಿರುವ 8 ವಿಭಾಗಗಳಿಗೆ ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆಯೂ ಇಲಾಖೆಗೆ ಪತ್ರ ಬರೆದಿದ್ದೇವೆ. ಸದ್ಯ 37 ಕಾರ್ಯನಿರತ ಸಿಬ್ಬಂದಿ ಇದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.