ADVERTISEMENT

‘ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕ ತಗ್ಗಿಸಿ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:49 IST
Last Updated 20 ಮಾರ್ಚ್ 2018, 19:49 IST
ಎಂ.ಬಿ.ರಾಜೇಶ್‌ ಗೌಡ ಅವರನ್ನು ಸುಧಾಕರ ಎಸ್‌.ಶೆಟ್ಟಿ ಅಭಿನಂದಿಸಿದರು. (ಎಡದಿಂದ) ಎಫ್‌ಕೆಸಿಸಿಐ ಉಪಾಧ್ಯಕ್ಷ ಸಿ.ಆರ್.ಜನಾರ್ಧನ, ಅಧ್ಯಕ್ಷ ಕೆ.ರವಿ, ಸಹಕಾರ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ, ರಮೇಶ್ ಚಂದ್ರ ಲಾಹೋಟಿ ಇದ್ದಾರೆ
ಎಂ.ಬಿ.ರಾಜೇಶ್‌ ಗೌಡ ಅವರನ್ನು ಸುಧಾಕರ ಎಸ್‌.ಶೆಟ್ಟಿ ಅಭಿನಂದಿಸಿದರು. (ಎಡದಿಂದ) ಎಫ್‌ಕೆಸಿಸಿಐ ಉಪಾಧ್ಯಕ್ಷ ಸಿ.ಆರ್.ಜನಾರ್ಧನ, ಅಧ್ಯಕ್ಷ ಕೆ.ರವಿ, ಸಹಕಾರ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ, ರಮೇಶ್ ಚಂದ್ರ ಲಾಹೋಟಿ ಇದ್ದಾರೆ   

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಶೇ1.5ರಿಂದ ಶೇ 0.5ಕ್ಕೆ ಇಳಿಸಬೇಕು ಎಂದು ಎಪಿಎಂಸಿ ವರ್ತಕರು ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿ) ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಎಪಿಎಂಸಿ ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ವಿಚಾರಸಂಕಿರಣದಲ್ಲಿ ಈ ಕುರಿತು  ಸಹಕಾರ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಿದರು.

ಎಫ್‌ಕೆಸಿಸಿಯ ಎಪಿಎಂಸಿ ಘಟಕದ ಅಧ್ಯಕ್ಷ ರಮೇಶ್‌ ಚಂದ್ರ ಲಾಹೋಟಿ, ‘ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೊರೇಟ್‌ ಕಂಪನಿಗಳ ಮಾರಾಟ ಮಳಿಗೆಗಳಿಗೆ ಶೇ 0.5 ಶುಲ್ಕ ವಿಧಿಸಲಾಗುತ್ತಿದೆ. ಎಪಿಎಂಸಿ ವರ್ತಕರಿಗೂ ಇದೇ ಶುಲ್ಕ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಎಲ್ಲ ಎಪಿಎಂಸಿ ಮಾರುಕಟ್ಟೆಗಳಲ್ಲಿ  ಕಾಂಕ್ರೀಟ್‌ ಪ್ಲಾಟ್‌ಫಾರಂ, ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಬೀದಿ ದೀಪ, ಸಮರ್ಪಕ ವಿದ್ಯುತ್‌ ಸರಬರಾಜು ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

ಕಲಬುರ್ಗಿ ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಸಂತೋಷ್‌ ಲಂಗರ್‌, ‘ರಾಷ್ಟ್ರೀಯ ಇ–ಮಾರುಕಟ್ಟೆ ಪ್ರೈವೇಟ್‌ ಸರ್ವಿಸ್‌ (ರಿಮ್ಸ್‌) ಒಂದು ಕನಸಿನ ಅರಮನೆ ಇದ್ದಂತೆ. ಇದು ನಾಮಫಲಕಕ್ಕೆ ಮಾತ್ರ ಸೀಮಿತಗೊಂಡಿದೆ. ಕೈಗೆ ಚಂದದ ಸ್ಮಾರ್ಟ್‌ ಫೋನ್‌ ಕೊಟ್ಟಿದ್ದಾರೆ. ಆದರೆ, ಅದರಲ್ಲಿ ನೆಟ್‌ವರ್ಕ್‌ ಇಲ್ಲದಂತಾಗಿದೆ ರಿಮ್ಸ್‌ ಪರಿಸ್ಥಿತಿ. ಇದರಿಂದ ರೈತರು ಮತ್ತು ವರ್ತಕರಿಗೆ ಯಾವುದೇ ಅನುಕೂಲವಿಲ್ಲ. ಎಪಿಎಂಸಿ ವ್ಯವಹಾರದಿಂದ ಇದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಇ–ಮಾರುಕಟ್ಟೆಯಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂಎಸ್‌ಪಿ) ಕಡಿಮೆ ದರ ಸಿಗುತ್ತಿದೆ. ಅಲ್ಲದೆ, ಹಣ ಪಾವತಿಯೂ ವಿಳಂಬವಾಗಿರುವ ನಿದರ್ಶನವಿದೆ. ತಿಪಟೂರಿನ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಮಾತ್ರ ರಿಮ್ಸ್‌ ಪ್ರಯೋಗ ನಡೆಸಲಾಗಿದೆ. ಉಳಿದ ಬೆಳೆಗಳ ಮೇಲೂ ಇದನ್ನು ಹೇರುವ ಯತ್ನ ನಡೆಯುತ್ತಿದೆ. ತೊಗರಿ, ಭತ್ತದಂತಹ ಬೆಳೆಗಳ ಖರೀದಿಯಲ್ಲಿ ಇದನ್ನು ಪ್ರಯೋಗ ಮಾಡಿ, ಅದರಲ್ಲಿ ಬರುವ ಫಲಿತಾಂಶ ನೋಡಿ ಇದನ್ನು ವಿಸ್ತರಿಸಬೇಕು ಎಂದು ಬಹುತೇಕ ವರ್ತಕ ಪ್ರತಿನಿಧಿಗಳು ಆಗ್ರಹಿಸಿದರು. 23 ಜಿಲ್ಲೆಗಳ ವರ್ತಕ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಚಿವರ ಗೈರು: ವರ್ತಕರ ಖಂಡನೆ

ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮತ್ತು ಸಹಕಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮನೋಜ್‌ ರಾಜನ್‌ ವಿಚಾರ ಸಂಕಿರಣಕ್ಕೆ ಗೈರು ಹಾಜರಾಗಿದ್ದನ್ನು ಎಪಿಎಂಸಿ ವರ್ತಕ ಪ್ರತಿನಿಧಿಗಳು ಖಂಡಿಸಿದರು.

‘ರೈತರು ಮತ್ತು ವರ್ತಕ ಪ್ರತಿನಿಧಿಗಳ ಸಮಸ್ಯೆ ಆಲಿಸಲು ಸಚಿವರು ಬರಬೇಕಿತ್ತು’ ಎಂದು ಎಫ್‌ಕೆಸಿಸಿ ಹಿರಿಯ ಉಪಾಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿ ತಿಳಿಸಿದರು.

‘ಎಪಿಎಂಸಿ ಅಸಂಘಟಿತ ವಲಯವಾಗಿಯೇ ಉಳಿದಿದೆ. ಮೊದಲು ಸಂಘಟಿತರಾಗಿ ಹೋರಾಟಗಳ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ವರ್ತಕರು ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.

‘ಮನೋಜ್‌ ರಾಜನ್‌ ಅವರ ಕನಸಿನ ಕೂಸು ರಿಮ್ಸ್‌. ಇದರಲ್ಲಿರುವ ಹುಳುಕುಗಳನ್ನು ಆಲಿಸಲು, ಸರಿಪಡಿಸಲು ಅವರಿಗೆ ಸಮಯ ಇಲ್ಲ. ಹಾಗಾಗಿಯೇ ಅವರು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ’ ಎಂದು ಎಪಿಎಂಸಿ ವರ್ತಕ ಪ್ರತಿನಿಧಿಗಳು ಹರಿಹಾಯ್ದರು.

ಪ್ರಮುಖ ಬೇಡಿಕೆಗಳು

* ವರ್ತಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಫಾರಂ ನಂ.35ಬಿ ರದ್ದುಪಡಿಸಬೇಕು

*  ಎಪಿಎಂಸಿ ಶುಲ್ಕ ಪಾವತಿ ವಿಳಂಬಕ್ಕೆ ವಿಧಿಸುವ ಶೇ 30ರ ದಂಡ ಕೈಬಿಡಬೇಕು

* ಸದ್ಯ ಚಾಲ್ತಿಯಲ್ಲಿರುವ ಬ್ಯಾಂಕ್‌ ಭದ್ರತೆ ರದ್ದುಪಡಿಸಬೇಕು

*  ವರ್ತಕರ ಲೆಕ್ಕ ಪರಿಶೀಲನೆಯನ್ನು ಎಪಿಎಂಸಿ ಕಾರ್ಯದರ್ಶಿಯೇ 6 ತಿಂಗಳೊಳಗೆ ಪೂರ್ಣಗೊಳಿಸಬೇಕು

* ಪ್ರತಿ ಎಪಿಎಂಸಿ ಆವರಣದಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು

* ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ದರ ಕುಸಿದಾಗ ರೈತರಿಗೆ ನೆರವಾಗುವ  ‘ಭವಂತರ್‌’ ಯೋಜನೆಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.