ADVERTISEMENT

ಕೆನಡಾದಲ್ಲಿ ಹಣದ ಅಗತ್ಯವಿದ್ದರೆ ರಾಜಕೀಯ ತೊರೆಯಬೇಕು

ಕೆನಡಾ ಲೋಕಸಭೆ ಸದಸ್ಯ ಚಂದ್ರಕಾಂತ ಆರ್ಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 19:30 IST
Last Updated 6 ಆಗಸ್ಟ್ 2016, 19:30 IST
ಗಾಂಧಿ ಭವನದಲ್ಲಿ ಶನಿವಾರ ನಾಗರಿಕ ವೇದಿಕೆ ಆಯೋಜಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಕೆನಡಾ ಲೋಕಸಭಾ ಸದಸ್ಯ ಚಂದ್ರಕಾಂತ ಆರ್ಯ ಅವರನ್ನು ಚಲನಚಿತ್ರ ನಿರ್ಮಾಪಕ ಕೆ.ಸಿ.ಎನ್‌. ಚಂದ್ರು ಅಭಿನಂದಿಸಿದರು. ಹಿರಿಯ ವಕೀಲ     ಪ್ರೊ. ರವಿವರ್ಮಕುಮಾರ್ ಇದ್ದಾರೆ.        - ಪ್ರಜಾವಾಣಿ ಚಿತ್ರ
ಗಾಂಧಿ ಭವನದಲ್ಲಿ ಶನಿವಾರ ನಾಗರಿಕ ವೇದಿಕೆ ಆಯೋಜಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಕೆನಡಾ ಲೋಕಸಭಾ ಸದಸ್ಯ ಚಂದ್ರಕಾಂತ ಆರ್ಯ ಅವರನ್ನು ಚಲನಚಿತ್ರ ನಿರ್ಮಾಪಕ ಕೆ.ಸಿ.ಎನ್‌. ಚಂದ್ರು ಅಭಿನಂದಿಸಿದರು. ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ಇದ್ದಾರೆ. - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೆನಡಾದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲ. ರಾಜಕಾರಣಿಗೆ  ಹಣದ ಅಗತ್ಯ ಇದ್ದರೆ, ಆತ ರಾಜಕಾರಣ ಬಿಟ್ಟು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಿಯಾಗುತ್ತಾನೆ’ ಎಂದು ಕೆನಡಾ ಲೋಕಸಭೆ ಸದಸ್ಯ ಚಂದ್ರಕಾಂತ ಆರ್ಯ ಹೇಳಿದರು.

ಗಾಂಧಿ ಭವನದಲ್ಲಿ ಶನಿವಾರ ನಾಗರಿಕ ವೇದಿಕೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಕೆನಡಾ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಈಗ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಹಲವು  ಉದಾಹರಣೆ ಇವೆ ಎಂದರು.

ಅಲ್ಲಿನ ಆಡಳಿತ ಸಂಪೂರ್ಣ ಪಾರದರ್ಶಕತೆಯಿಂದ ಕೂಡಿರುತ್ತದೆ.  ಜನಪ್ರತಿನಿಧಿ ತನ್ನ ಕ್ಷೇತ್ರದ ಸಣ್ಣ ಕೆಲಸಕ್ಕೂ ಸಂಬಂಧಪಟ್ಟ ಸಚಿವಾಲಯಕ್ಕೆ ಮಾಹಿತಿ ನೀಡಬೇಕೇ ಹೊರತು  ನೇರವಾಗಿ ಯಾವುದೇ ಅಧಿಕಾರಿಗೆ ಕರೆ ಮಾಡಿ ಸೂಚಿಸುವಂತಿಲ್ಲ ಎಂದು ಹೇಳಿದರು.

‘ಎಲ್ಲವೂ ಪಾರದರ್ಶಕತೆ ಇರುವ ಕಾರಣ ತುಮಕೂರು ಜಿಲ್ಲೆಯ ಶಿರಾ ಮೂಲದವನಾದ ನಾನು ಕೆನಡಾದಲ್ಲಿ ಉದ್ಯಮ ಆರಂಭಿಸಿ ಅಲ್ಲಿನ ಲೋಕಸಭೆ ಸದಸ್ಯನಾಗಲು ಸಾಧ್ಯವಾಯಿತು’ ಎಂದರು.

‘ಭಾರತದ ರಾಜಕಾರಣಿಗಳೆಲ್ಲ ಕೆಟ್ಟವರು ಅಥವಾ ರಾಜಕಾರಣ ಸಂಪೂರ್ಣ ಕೆಟ್ಟು ಹೋಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಾಮಾಣಿಕತೆ ಉಳಿಸಿಕೊಂಡವರು ಇಲ್ಲಿಯೂ ಇದ್ದಾರೆ’ ಎಂದು ಹೇಳಿದರು.

ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡ ಭಾರತಕ್ಕಿಂತ ವಿಭಿನ್ನವಾಗಿದೆ. ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನೆಗೆ ಒತ್ತು ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಹಂತದ ಶಿಕ್ಷಣ ಮುಗಿಸುವ ವೇಳೆಗೆ ವೃದ್ಧಾಶ್ರಮ, ಆಸ್ಪತ್ರೆಗಳಲ್ಲಿ 40 ಗಂಟೆ ಕೆಲಸ ಮಾಡುವುದು ಕಡ್ಡಾಯ.  ವ್ಯಾಸಂಗದ ಅವಧಿಯಲ್ಲೆ ಜೀವನಾನುಭವ ಕಲಿಸಲಾಗುತ್ತದೆ. ಹೀಗಾಗಿ ಶಿಕ್ಷಣ ಮುಗಿದ ಕೂಡಲೇ ಸ್ವತಂತ್ರವಾಗಿ ಜೀವನ ನಡೆಸುವುದು ಅವರಿಗೆ ಸುಲಭ ಎಂದರು.

ಕೆನಡಾದಲ್ಲಿ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ಸೇರುವ ಆಕಾಂಕ್ಷೆ ಇದ್ದರೆ ಯಾರದೇ ಶಿಫಾರಸ್ಸಿನ ಆಗತ್ಯ ಇಲ್ಲ. ವೆಬ್‌ಸೈಟ್‌ಗಳ ಮೂಲಕ ಎಲ್ಲ ಮಾಹಿತಿ ಪಡೆದು ಕುಳಿತಲ್ಲೇ ಅರ್ಜಿ ಹಾಕಬಹುದು. ಭಾರತದ 20 ಸಾವಿರ ವಿದ್ಯಾರ್ಥಿಗಳು ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.