ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೈಗಾರಿಕಾ ಪರವಾನಗಿ ಪ್ರಕ್ರಿಯೆಯನ್ನು ಇದೀಗ ಮತ್ತಷ್ಟು ಸರಳೀಕರಣಗೊಳಿಸಿದ್ದು, ರಾಜ್ಯದಲ್ಲಿ 25 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಬಂಡವಾಳದ ಅತಿ ಸಣ್ಣ (ಮೈಕ್ರೊ) ಕೈಗಾರಿಕೆಗಳು ಇನ್ನು ಮುಂದೆ ಜಲ ಹಾಗೂ ವಾಯುಮಾಲಿನ್ಯ ತಡೆ ಕಾಯ್ದೆಯಡಿ ಆರಂಭದ ಸಮಯದಲ್ಲಿ ಮಾತ್ರ ಒಂದು ಬಾರಿ ಪರವಾನಗಿ ಪಡೆದುಕೊಂಡರೆ ಸಾಕು. ಮಂಡಳಿ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೈಗಾರಿಕೆಗಳನ್ನು ದೊಡ್ಡ ಪ್ರಮಾಣ (10 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಬಂಡವಾಳ ಹೂಡಿದ ಕೈಗಾರಿಕೆಗಳು), ಮಧ್ಯಮ ಪ್ರಮಾಣದ ಕೈಗಾರಿಕೆಗಳು (ರೂ. 5ರಿಂದ 10 ಕೋಟಿ ಬಂಡವಾಳ ಹೂಡಿದ ಕೈಗಾರಿಕೆಗಳು), ಸಣ್ಣ ಪ್ರಮಾಣದ ಕೈಗಾರಿಕೆಗಳು (ರೂ. 25 ಲಕ್ಷದಿಂದ ರೂ. 5 ಕೋಟಿ ಬಂಡವಾಳ ಹೂಡಿದ) ಹಾಗೂ ಅತಿ ಸಣ್ಣ ಪ್ರಮಾಣದ ಕೈಗಾರಿಕೆಗಳು (ರೂ. 25 ಲಕ್ಷಕ್ಕಿಂತ ಕಡಿಮೆ ಬಂಡವಾಳ ತೊಡಗಿಸಿದ) ಎಂದು ವರ್ಗೀಕರಿಸಲಾಗಿದೆ.
ವರ್ಗೀಕರಣಕ್ಕೆ ಅನುಗುಣವಾಗಿ ಒಂದರಿಂದ ಹತ್ತು ವರ್ಷಗಳ ಅವಧಿಗೆ ಪರವಾನಗಿ ನೀಡಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅತಿ ಸಣ್ಣ (ಮೈಕ್ರೊ) ಕೈಗಾರಿಕೆಗಳು ಆರಂಭದ ಸಮಯದಲ್ಲಿ ಒಂದು ಬಾರಿ ಪರವಾನಗಿ ಪಡೆದುಕೊಂಡಲ್ಲಿ ಸಾಕು.
ರಾಜ್ಯದಲ್ಲಿನ ಕೈಗಾರಿಕೆಗಳನ್ನು ಕೆಂಪು, ಕಿತ್ತಳೆ, ಹಸಿರು ಎಂದು ಮೂರು ಗುಂಪುಗಳಾಗಿ ವಿಭಾಗಿಸಲಾಗಿದ್ದು, ಅವುಗಳಿಗೆ ನೀಡುವ ಪರವಾನಗಿ ಅವಧಿಯನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
ಬೃಹತ್ (ಕೆಂಪು): ಒಂದು ವರ್ಷದ ಪರವಾನಗಿ ಒಂದು ವರ್ಷದ ಶುಲ್ಕ ಸಂಗ್ರಹದೊಂದಿಗೆ; ಕಿತ್ತಳೆ: ಎರಡು ವರ್ಷದ ಪರವಾನಗಿ ಎರಡು ವರ್ಷದ ಶುಲ್ಕ ಸಂಗ್ರಹದೊಂದಿಗೆ; ಹಸಿರು: 10 ವರ್ಷದ ಪರವಾನಗಿ 5 ವರ್ಷದ ಶುಲ್ಕ ಸಂಗ್ರಹದೊಂದಿಗೆ.
ಮಧ್ಯಮ (ಕೆಂಪು): ಎರಡು ವರ್ಷದ ಪರವಾನಗಿ ಎರಡು ವರ್ಷದ ಶುಲ್ಕ ಸಂಗ್ರಹದೊಂದಿಗೆ; ಕಿತ್ತಳೆ: ಎರಡು ವರ್ಷದ ಪರವಾನಗಿ 2 ವರ್ಷದ ಶುಲ್ಕ ಸಂಗ್ರಹದೊಂದಿಗೆ; ಹಸಿರು: 10 ವರ್ಷದ ಪರವಾನಗಿ 5 ವರ್ಷದ ಶುಲ್ಕ ಸಂಗ್ರಹದೊಂದಿಗೆ.
ಸಣ್ಣ (ಕೆಂಪು): 5 ವರ್ಷದ ಪರವಾನಗಿ 3 ವರ್ಷದ ಶುಲ್ಕ ಸಂಗ್ರಹದೊಂದಿಗೆ; ಕಿತ್ತಳೆ- 5 ವರ್ಷದ ಪರವಾನಗಿ 3 ವರ್ಷದ ಶುಲ್ಕ ಸಂಗ್ರಹದೊಂದಿಗೆ; ಹಸಿರು- 10 ವರ್ಷದ ಪರವಾನಗಿ ಒಂದು ವರ್ಷದ ಶುಲ್ಕ ಸಂಗ್ರಹದೊಂದಿಗೆ.
ಹಲವಾರು ಕೈಗಾರಿಕೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಈ ಪರವಾನಗಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಮಂಡಳಿಯನ್ನು ಕೋರಿದ್ದವು. ಅದರಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪರವಾನಗಿ ಪಡೆಯದೇ ಇರುವ ಹೆಚ್ಚು ಕೈಗಾರಿಕೆಗಳು ಸ್ವಯಂಪ್ರೇರಿತವಾಗಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮಂಡಳಿ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.