ADVERTISEMENT

ಕೌಟುಂಬಿಕ ಕಲಹದಿಂದ ಮನನೊಂದ ವ್ಯಕ್ತಿ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

 ಜಗದೀಶ್ (28) ಆತ್ಮಹತ್ಯೆ ಮಾಡಿಕೊಂಡವರು. ರೂಪಾ ಎಂಬುವರನ್ನು ವಿವಾಹವಾಗಿದ್ದ ಅವರು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ಬೆಳಿಗ್ಗೆಯೂ ಅವರ ನಡುವೆ ಜಗಳವಾಗಿತ್ತು. ಇದರಿಂದ ಬೇಸರಗೊಂಡ ಜಗದೀಶ್, ಪತ್ನಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ್ಡಿ ದಂಧೆ: ಬಂಧನ
ಸಾರ್ವಜನಿಕರಿಗೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಕೆಂಪೇಗೌಡನಗರದ ಶಿವಶಂಕರ ಅಪಾರ್ಟ್‌ಮೆಂಟ್ ನಿವಾಸಿ ಶಾಂತಕುಮಾರಿ (39) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಜನರಿಗೆ ಸಾಲ ನೀಡುತ್ತಿದ್ದ ಅವರು ಶೇ 10ರಿಂದ 15ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದರು. ಭದ್ರತೆಗೆ ಖಾಲಿ ಚೆಕ್, ಎಲ್‌ಐಸಿ ಬಾಂಡ್ ಮತ್ತಿತರ ದಾಖಲೆಗಳನ್ನು ಪಡೆಯುತ್ತಿದ್ದರು. ಪರವಾನಗಿ ಇಲ್ಲದೆ ಚೀಟಿ ವ್ಯವಹಾರವನ್ನೂ ನಡೆಸುತ್ತಿದ್ದರು. ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಖಾಲಿ ಚೆಕ್, ಎಲ್‌ಐಸಿ ಬಾಂಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಾಂತಕುಮಾರಿ ಸುಮಾರು 50 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವೇಶ್ಯಾವಾಟಿಕೆ: ಬಂಧನ
ಕೆಲಸ ಕೊಡಿಸುವುದಾಗಿ ಹೇಳಿ ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ಬಲವಂತಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಆರೋಪದ ಮೇಲೆ ಐದು ಮಂದಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್‌ಸಿಟಿ ಮಿತ್ರ ಲೇಔಟ್‌ನ ಪ್ರಸಾದ್ ಯಾದವ್ (33), ಮೀನಾದೇವಿ (31), ತಾವರೆಕರೆಯ ದಿನೇಶ್ ಶರ್ಮಾ (43), ಗರುಡಾಚಾರ್‌ಪಾಳ್ಯದ ಮೋಹನ್ (26) ಮತ್ತು ಮಹೇಂದರ್ (27) ಬಂಧಿತರು.
ಆರೋಪಿಗಳಿಂದ ನಾಲ್ಕು ಸಾವಿರ ನಗದು, ಕಾರು ಮತ್ತು ಆರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.