ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿದ್ಯಾರ್ಥಿಗಳ ಉದ್ಯೋಗ ಮಾರ್ಗದರ್ಶಿ ಘಟಕದ (ಪ್ಲೇಸ್‌ಮೆಂಟ್ ಸೆಲ್) ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಂಸ್ಥೆಯ ಆಡಳಿತ ನಿರ್ಧರಿಸಿದೆ.
ಐಐಎಂ ಮತ್ತು ಐಐಟಿ ಉದ್ಯೋಗ ಮಾರ್ಗದರ್ಶಿ ಘಟಕಗಳ ಮಾದರಿಯಲ್ಲೇ ಐಐಎಸ್‌ಸಿ ಘಟಕವೂ ಕೆಲಸ ಮಾಡಬೇಕು ಎನ್ನುವುದು ಈ ಬದಲಾವಣೆ ಹಿಂದಿನ ಮುಖ್ಯ ಉದ್ದೇಶವಾಗಿದೆ. ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿ ಎಂ. ಮಥಿರಾಜನ್ ಅವರನ್ನು ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಐಐಎಸ್‌ಸಿಯಿಂದ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು 2015ರಲ್ಲಿ ಮೊದಲ ತಂಡ ಹೊರಬರಲಿದೆ. ಆ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಮಥಿರಾಜನ್ ಈಗಾಗಲೇ ಎರಡು ಕಂಪೆನಿಗಳ ಜತೆ ಚರ್ಚೆ ನಡೆಸಿದ್ದಾರೆ. ಇದುವರೆಗೆ ಸಂಸ್ಥೆಯಿಂದ ಇಂತಹ ಪ್ರಯತ್ನಗಳು ಒಮ್ಮೆಯೂ ಆಗಿರಲಿಲ್ಲ. ಆಸಕ್ತಿವಹಿಸಿ ಬಂದ ಕಂಪೆನಿಗಳ ನೇಮಕಾತಿ ವಿಭಾಗದ ಮುಖ್ಯಸ್ಥರೇ ವಿದ್ಯಾರ್ಥಿಗಳ ಜತೆ ವ್ಯವಹರಿಸುತ್ತಿದ್ದರು.
‘ಈ ವರ್ಷ ಎಲ್ಲ ಕಂಪೆನಿಗಳಿಗೆ ಮುಂಚಿತವಾಗಿಯೇ ಆಹ್ವಾನವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಯನ್ನು ಬಲುಬೇಗ ಮುಗಿಸಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ಜುಲೈನಲ್ಲಿ ಕಂಪೆನಿಗಳಿಗೆ ಇ–ಮೇಲ್ ಕಳಿಸುತ್ತಿದ್ದೆವು. ಇದರಿಂದ ಅವಕಾಶಗಳು ತಪ್ಪಿದ್ದೂ ಉಂಟು. ಈ ಸಲ ಹಾಗಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ವಿದ್ಯಾರ್ಥಿಗಳ ಸಮನ್ವಯಾಧಿಕಾರಿ ವಿವೇಕ್ ವರ್ಮಾ ಹೇಳುತ್ತಾರೆ.
‘ಕಳೆದ ವರ್ಷ ಡಚ್ ಬ್ಯಾಂಕ್, ಸ್ಟ್ಯಾನ್ಲೆ ಮಾರ್ಗನ್ ಸೇರಿದಂತೆ ಹಲವು ಕಂಪೆನಿಗಳು ಕ್ಯಾಂಪಸ್ ಆಯ್ಕೆಗೆ ಆಸಕ್ತಿ ತೋರಿದ್ದವು. ಆದರೆ, ಜೂನ್‌ನಲ್ಲಿ ಈ ಕಂಪೆನಿಗಳೆಲ್ಲ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಕಾರಣ ನಮ್ಮ ವಿದ್ಯಾರ್ಥಿಗಳಿಗೆ ಭಾಗವಹಿಸಲು ಆಗಿರಲಿಲ್ಲ’ ಎಂದು ಅವರು ವಿವರಿಸುತ್ತಾರೆ.
‘ಈ ವರ್ಷ ಐಐಟಿಗಳಿಗಿಂತ ಮುಂಚಿತವಾಗಿ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆ ಆರಂಭ ಮಾಡುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಕ್ಕಂತಾಗುತ್ತದೆ. ಆದ್ದರಿಂದಲೇ ಈ ಬದಲಾವಣೆ ತಂದಿದ್ದೇವೆ’ ಎಂದು ಹೇಳುತ್ತಾರೆ.
ಐಐಎಸ್‌ಸಿ ಉದ್ಯೋಗ ಮಾರ್ಗದರ್ಶಿ ಕೇಂದ್ರದ ವೆಬ್‌ಸೈಟ್ ಸಹ ಬದಲಾಗಲಿದೆ. ಸಂಸ್ಥೆಯ ಎಲ್ಲ 46 ವಿಭಾಗಗಳ ವಿದ್ಯಾರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲಿದ್ದು, ತಮ್ಮ ವೈಯಕ್ತಿಕ ವಿವರವನ್ನೂ ಅದರಲ್ಲಿ ನಮೂದಿಸಲಿದ್ದಾರೆ. ಕ್ಯಾಂಪಸ್ ಆಯ್ಕೆಯಲ್ಲಿ ಪಾಲ್ಗೊಳ್ಳುವ ಕಂಪೆನಿಗಳಿಗೆ ಮಾತ್ರ ಆ ವಿವರ ನೋಡಲು ಅವಕಾಶ ಒದಗಿಸಲಾಗುತ್ತದೆ.
‘ನಮ್ಮ ಕಾರ್ಯ ಚಟುವಟಿಕೆಗಳು ವಿಸ್ತರಣೆಗೊಳ್ಳುತ್ತಿವೆ. ಪದವಿ ಕೋರ್ಸ್‌ಗಳನ್ನು ಹೊಸದಾಗಿ ಪರಿಚಯಿಸಿದ್ದೇವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅವರ ಗಾತ್ರಕ್ಕೆ ಅನುಗುಣವಾಗಿ ಉದ್ಯೋಗ ಮಾರ್ಗದರ್ಶಿ ಘಟಕಕ್ಕೆ ಹೊಸ ರೂಪ ನೀಡುವುದು ಅನಿವಾರ್ಯವಾಗಿದೆ’ ಎನ್ನುವುದು ಐಐಎಸ್‌ಸಿ ನಿರ್ದೇಶಕ ಪ್ರೊ. ಪಿ.ಬಲರಾಮ್ ಅವರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.