ADVERTISEMENT

ಕ್ಯಾನ್ಸರ್‌ನಂತೆ ಕಾಡುತ್ತಿರುವ ಜಾತಿ - ವಿಷಾದ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಬೆಂಗಳೂರು: ‘ಭಾರತದ ಮಟ್ಟಿಗೆ ಜಾತಿ ಎಂಬುದು ಕ್ಯಾನ್ಸರ್ ರೋಗದಂತೆ ಕಾಡುತ್ತಿದ್ದು ಜನಧರ್ಮ ಕಣ್ಮರೆಯಾಗುತ್ತಿದೆ’ ಎಂದು ಕವಿ ಡಾ. ಎಲ್. ಹನುಮಂತಯ್ಯ ವಿಷಾದ ವ್ಯಕ್ತಪಡಿಸಿದರು.ಸಿರಿಗೆರೆಯ ತರಳಬಾಳು ಮಠ ಆಯೋಜಿಸಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಯಾವ ಹಳ್ಳಿಯಲ್ಲಿಯೂ ಇಂದಿಗೂ ಅಸ್ಪೃಶ್ಯತೆ ಮರೆಯಾಗಿಲ್ಲ. ಜನಧರ್ಮ ಸಮಾಜದಿಂದ ಮರೆಯಾಗುತ್ತಿದೆ.ಜಾತಿ ತೊಲಗದಿದ್ದರೆ ಸ್ವರಾಜ್ಯ ಕೂಡ ಯಶಸ್ವಿಯಾಗಲಾರದು, ರಾಷ್ಟ್ರೀಯ ಭಾವನೆ ಮೂಡುವುದು ಸಾಧ್ಯವಿಲ್ಲ.ಆದ್ದರಿಂದ ಹಿಂದೂಗಳ ಮೆದುಳು ಹಾಗೂ ಹೃದಯಕ್ಕೆ ಚಿಕಿತ್ಸೆ ನೀಡುವ ಅಗತ್ಯವಿದೆ’ಎಂದರು.

‘ಧರ್ಮ ಎಂದಿಗೂ ಆಡಂಬರದ ವಿಚಾರವಾಗದೇ ಅಂತರಂಗಕ್ಕೆ ಸಂಬಂಧಿಸಿದ್ದಾಗಿರಬೇಕು.ನಿಜವಾದ ಧರ್ಮ ಆತ್ಮಶುದ್ಧಿಯನ್ನು ತಿಳಿಸುತ್ತದೆ, ವ್ಯಕ್ತಿಯ ಆತ್ಮಾಭಿಮಾನವನ್ನು ಹೆಚ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ವಚನಗಳು ಜಾತಿ ಧರ್ಮದ ಹಂಗನ್ನು ಮೀರುವ ಪ್ರಯತ್ನ ಮಾಡಿದ್ದವು.ದೇವಾಲಯ ಸಂಸ್ಕೃತಿಯನ್ನು ಶರಣ ಚಳವಳಿ ಇಷ್ಟಪಡಲಿಲ್ಲ. ಏಕದೇವೋಪಾಸನೆಗೆ ಒತ್ತು ನೀಡಿದ ಶರಣರು ಬಹುಸಂಸ್ಕೃತಿಯನ್ನು ಪ್ರೀತಿಸಿದರು.ಆದ್ದರಿಂದಲೇ ಅನೇಕ ಜಾತಿಗಳ ಜನ ಶರಣರಾಗಿ ರೂಪುಗೊಳ್ಳಲು ಸಾಧ್ಯವಾಯಿತು’ ಎಂದರು.

‘ಏಕ ಸಂಸ್ಕೃತಿಯಲ್ಲಿ ಚಲನೆ ಇಲ್ಲ. ಆಡಂಬರದ ಆಧ್ಯಾತ್ಮಕ್ಕಿಂತ ಬಯಲೇ ಆಲಯವೆಂದ ಆಧ್ಯಾತ್ಮ ಮುಖ್ಯವಾಗಿದೆ. ಮಾದಾರ ಚೆನ್ನಯ್ಯ, ಬೇಡರ ಕಣ್ಣಪ್ಪರ ನಿಜವಾದ ಭಕ್ತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಿರುವ ಶರಣರು ಚಿಂತಿಸಬೇಕಿದೆ’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ನ್ಯಾಯಮೂರ್ತಿ ರಾಮಾಜೋಯಿಸ್ ಮಾತನಾಡಿ ‘ಭ್ರಷ್ಟಾಚಾರ ದೇಶ ಬಿಟ್ಟು ತೊಲಗಲಿ ಎಂಬ ಚಳವಳಿ ಮಾಡುವುದು ಯುವಜನರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ನೈತಿಕ ಅಧಃಪತನವನ್ನು ನಿರ್ನಾಮ ಮಾಡಲು ಪಣತೊಡಬೇಕಿದೆ’ ಎಂದು ತಿಳಿಸಿದರು.

‘2ಜಿ, ಸಿಡಬ್ಲ್ಯೂಜಿ, ಇತ್ಯಾದಿ ಹಗರಣಗಳಿಂದಾಗಿ ನೈತಿಕ ಅಧಃಪತನ ಉಂಟಾಗಿದೆ. ಹಳೆ ಮೈಸೂರಿನ ಇತಿಹಾಸದಲ್ಲಿ ಅನೇಕ ದಶಕಗಳ ಕಾಲ ಲಂಚದ ವಿವಾದವೇ ಇರಲಿಲ್ಲ. ವಿವಾದಗಳು ಎದ್ದಾಗಲೂ ಪ್ರಾಮಾಣಿಕತೆ ಗೆದ್ದಿತ್ತು’ ಎಂದರು.
‘ಲಂಚ ಪಡೆಯುತ್ತಿರುವವರು, ದುಷ್ಕೃತ್ಯಗಳನ್ನು ಎಸಗುತ್ತಿರುವವರು ವಿದ್ಯಾವಂತರೇ ಆಗಿದ್ದಾರೆ. ಧರ್ಮ, ಅರ್ಥ, ಕಾಮದ ಅರ್ಥದ ತಿರುಳನ್ನು ಹೇಳುವ ಶಿಕ್ಷಣದ ಅಗತ್ಯವಿದೆ’ ಎಂದರು. ವಿಧಾನ ಪರಿಷತ್ ಸದಸ್ಯ ಎನ್.ತಿಪ್ಪಣ್ಣ ಮಾತನಾಡಿ ‘ತರಳಬಾಳು ಮಠ ಸಮಾಜದ ವಿರೋಧ, ಅಪಮಾನಗಳನ್ನು ಸಹಿಸಿಕೊಂಡು ಬೆಳೆದ ಧಾರ್ಮಿಕ ಸಂಸ್ಥೆಯಾಗಿದೆ’ ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ಮಾತನಾಡಿದರು. ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,  ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್, ಸಂಸದ ಅನಂತಕುಮಾರ್, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ರಾಣಿ ಸತೀಶ್, ವಿಜ್ಞಾನಿ ಡಾ. ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.