ADVERTISEMENT

ಗಂಗಾಧರನ ಗುಡ್ಡೆ: ಕರಡಿ ಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 19:39 IST
Last Updated 6 ನವೆಂಬರ್ 2017, 19:39 IST
ಮರವೇರಿ ಕುಳಿತಿರುವ ಕರಡಿ ಮರಿ
ಮರವೇರಿ ಕುಳಿತಿರುವ ಕರಡಿ ಮರಿ   

ಬೆಂಗಳೂರು: ಕನಕಪುರ ರಸ್ತೆ ಬಳಿಯ ಗಂಗಾಧರನ ಗುಡ್ಡೆಯಲ್ಲಿ ಹೊಲದಲ್ಲಿದ್ದ 9 ತಿಂಗಳ ಕರಡಿ ಮರಿಯನ್ನು ವನ್ಯಜೀವಿ ಸಂರಕ್ಷಣಾ ತಂಡದವರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಹೊಲದ ನಡುವೆ ಕರಡಿಯ ಮರಿ ಇರುವುದನ್ನು ಗ್ರಾಮಸ್ಥರು ಶನಿವಾರ ನೋಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಲಯ ಅರಣ್ಯ ಅಧಿಕಾರಿ ದಿನೇಶ್‌ ಗೌಡ ಅವರು ಈ ಬಗ್ಗೆ ಬನ್ನೇರುಘಟ್ಟ ಕರಡಿಧಾಮಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿ ಕರಡಿ ಮರಿಯನ್ನು ವಶಕ್ಕೆ ಪಡೆದ ಕರಡಿಧಾಮದ ಅಧಿಕಾರಿಗಳು ಅದಕ್ಕೆ ಚಿಕಿತ್ಸೆ ನೀಡಿದರು.

‘ಕರಡಿ ಮರಿಯ ಚಲನವಲನದ ಬಗ್ಗೆ ಕೆಲವು ಗಂಟೆ ನಿಗಾ ವಹಿಸಿದ್ದೆವು. ಬಳಿಕ ಅದನ್ನು ಸಮೀಪದ ಕಾಡಿಗೆ ಬಿಟ್ಟಿದ್ದೇವೆ’ ಎಂದು ವನ್ಯಜೀವಿ ಸಂರಕ್ಷಕ ಹಾಗೂ ವನ್ಯಜೀವಿ ಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ಅರುಣ್‌ ಎ. ಷಾ ತಿಳಿಸಿದ್ದಾರೆ.

ADVERTISEMENT

‘ಕಳ್ಳ ಬೇಟೆ ಹಾಗೂ ನೆಲೆಗಳ ನಾಶದಿಂದಾಗಿ ಕರಡಿ ಸಂತತಿ ಅಪಾಯಕ್ಕೆ ಸಿಲುಕಿದೆ. ಅಪಾಯದ ಅಂಚಿನಲ್ಲಿರುವ ವನ್ಯಜೀವಿಗಳ ಕುರಿತು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಐಯುಸಿಎನ್‌) ಸಿದ್ಧಪಡಿಸಿರುವ ಕೆಂಪು ಪಟ್ಟಿಯಲ್ಲಿ ಕರಡಿ ಕೂಡಾ ಸ್ಥಾನ ಪಡೆದಿದೆ’ ಎಂದು ಅವರು ತಿಳಿಸಿದರು.

ಮೂರು ತಿಂಗಳ ಹಿಂದೆ ಕೊರಟೆಗೆರೆ ಬಳಿ ತಂತಿ ಬೇಲಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಕರಡಿಯನ್ನು ವನ್ಯಜೀವಿ ಸಂರಕ್ಷಕರ ತಂಡ ರಕ್ಷಣೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.