ADVERTISEMENT

ಗಾಂಧಿನಗರ ವಾರ್ಡ್ ಉಪಚುನಾವಣೆ: ಮತ್ತೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಗಾಂಧಿನಗರ ವಾರ್ಡ್ ಉಪಚುನಾವಣೆ: ಮತ್ತೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
ಗಾಂಧಿನಗರ ವಾರ್ಡ್ ಉಪಚುನಾವಣೆ: ಮತ್ತೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು   

ಬೆಂಗಳೂರು: ಬಿಬಿಎಂಪಿಯ ಗಾಂಧಿನಗರ ವಾರ್ಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಗೋಪಾಲಕೃಷ್ಣ ಅವರು 1,546 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ಗೋಪಾಲಕೃಷ್ಣ ಅವರು ಒಟ್ಟು 6,271 ಮತ ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಿ.ರಾಮಚಂದ್ರ ಅವರು 4,725, ಜೆಡಿಎಸ್‌ನ ಪಿ.ಕೆ.ಸುರೇಶ್ 408, ಎಐಡಿಎಂಕೆಯ ಎಂ.ಪಿ.ಯುವರಾಜ್ 171, ಜೆಡಿಯುನ ಎಸ್.ಅಶ್ವತ್ಥನಾರಾಯಣ 37, ಪಕ್ಷೇತರ ಅಭ್ಯರ್ಥಿಗಳಾದ ಸಿ.ಜಿ.ಕೆ.ರಾಮು 47, ಅಬ್ದುಲ್ ಗಫರ್ 25, ಕೆ.ರಮೇಶ್ 10 ಮತ್ತು ಎಸ್. ಎನ್.ರಮೇಶ್ ಅವರು 24 ಮತ ಪಡೆದಿದ್ದಾರೆ. ಕಣದಲ್ಲಿದ್ದ ಒಂಬತ್ತು ಅಭ್ಯರ್ಥಿಗಳಲ್ಲಿ ಏಳು ಮಂದಿ ಠೇವಣಿ ಕಳೆದುಕೊಂಡಿದ್ದಾರೆ.

ಮೂವತ್ತು ಟೇಬಲ್‌ಗಳಲ್ಲಿ ಒಟ್ಟು ಐದು ಸುತ್ತಿನ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಗೋಪಾಲಕೃಷ್ಣ ಜಯ ದಾಖಲಿಸಿದರು.

`ಈ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಮತ್ತು ಎಲ್ಲ ಕಾರ್ಯಕರ್ತರ ಪರಿಶ್ರಮದಿಂದ ಜಯ ಸಿಕ್ಕಿದೆ. ಈ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದ ನಟರಾಜ್ ಅವರ ಹತ್ಯೆ ನಡೆದಿದ್ದರಿಂದ ಅನುಕಂಪವೂ ಸ್ವಲ್ಪಮಟ್ಟಿಗೆ ಕೆಲಸ ಮಾಡಿದೆ. ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಟರಾಜ್ ಅವರು ಕೈಗೊಂಡಿದ್ದ ಕಾರ್ಯಗಳನ್ನು ಮುಂದುವರೆಸುತ್ತೇನೆ~ ಎಂದು ಗೋಪಾಲಕೃಷ್ಣ ಹೇಳಿದರು.

`ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಮತದಾರರು ಭಾರಿ ಅಂತರದಿಂದ ಗೆಲ್ಲಿಸಿದ್ದಾರೆ. ಬಿಜೆಪಿಯನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂಬುದು ಈ ಫಲಿತಾಂಶದಿಂದ ಗೊತ್ತಾಗುತ್ತದೆ~ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಗೆಲುವಿನ ಮುನ್ಸೂಚನೆ ಸಿಕ್ಕಂತೆ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದರು. ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಚುನಾವಣಾ ಅಧಿಕಾರಿಗಳು ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ಸಂಭ್ರಮ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ಗೋಪಾಲಕೃಷ್ಣ ಅವರಿಗೆ ಭಾರಿ ಗಾತ್ರದ ಹೂವಿನ ಹಾರಗಳನ್ನು ಹಾಕಿ ಮೆರವಣಿಗೆ ಮಾಡಿದರು. ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ನಟರಾಜ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರಿಂದ ವಾರ್ಡ್‌ಗೆ ಮರು ಚುನಾವಣೆ ಘೋಷಣೆ ಆಗಿತ್ತು. ಒಟ್ಟು 24,851 ಮತದಾರರಿರುವ ವಾರ್ಡ್‌ನಲ್ಲಿ 11,718 ಮತ ಚಲಾವಣೆ (ಶೇ 47.15) ಆಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.