ADVERTISEMENT

`ಗುಣಮಟ್ಟ ಆಹಾರ ಪದಾರ್ಥ ಖರೀದಿಸಿ'

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2013, 19:59 IST
Last Updated 13 ಫೆಬ್ರುವರಿ 2013, 19:59 IST
ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಅಗ್‌ಮಾರ್ಕ್ ವಸ್ತುಪ್ರದರ್ಶನದಲ್ಲಿ ಆಹಾರ ಉತ್ಪನ್ನಗಳ ಕಲಬೆರಕೆಯನ್ನು ಪರೀಕ್ಷಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು 		-ಪ್ರಜಾವಾಣಿ ಚಿತ್ರ
ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಅಗ್‌ಮಾರ್ಕ್ ವಸ್ತುಪ್ರದರ್ಶನದಲ್ಲಿ ಆಹಾರ ಉತ್ಪನ್ನಗಳ ಕಲಬೆರಕೆಯನ್ನು ಪರೀಕ್ಷಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಗ್ರಾಹಕರು ಗುಣಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಆಹಾರ ಪದಾರ್ಥಗಳ ಕಲಬೆರಕೆ ತಡೆಗಟ್ಟಲು ಮುಂದಾಗಬೇಕು' ಎಂದು ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ಮತ್ತು ಕೇಂದ್ರ ಕೃಷಿ ಇಲಾಖೆಯ ಕೃಷಿ ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯ ನಗರದಲ್ಲಿ ಬುಧವಾರದಿಂದ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಅಗ್‌ಮಾರ್ಕ್ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

`ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡುವುದು ಕೊಲೆ ಮಾಡುವುದಕ್ಕಿಂತ ದೊಡ್ಡ ಅಪರಾಧ. ಆಹಾರ ಪದಾರ್ಥಗಳ ಕಲಬೆರಕೆಯಿಂದ ಅದನ್ನು ಸೇವಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಆಧುನಿಕ ಬೇಸಾಯ ಕ್ರಮದಿಂದ ಆಹಾರ ಧಾನ್ಯಗಳು ಬೆಳೆಯುವ ಹಂತದಲ್ಲೇ ವಿಷಯುಕ್ತವಾಗಿರುತ್ತವೆ. ಇದರ ಜತೆಗೆ ಕಲಬೆರಕೆ ಮಾಡುವುದರಿಂದ ಅಪಾಯ ಹೆಚ್ಚು' ಎಂದರು.

`ಗುಣಮಟ್ಟದ ಆಹಾರ ಪದಾರ್ಥಗಳ ಖರೀದಿಯ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆಗಬೇಕು. ಅಗ್‌ಮಾರ್ಕ್ ಇರುವ ಆಹಾರ ಉತ್ಪನ್ನಗಳ ಖರೀದಿಗೆ ಗ್ರಾಹಕರು ಒಲವು ತೋರಬೇಕು. ಜಿಲ್ಲಾಮಟ್ಟದಲ್ಲಿ ಅಗ್‌ಮಾರ್ಕ್ ವಸ್ತುಪ್ರದರ್ಶನಗಳನ್ನು ಏರ್ಪಡಿಸಲು ಅಧಿಕಾರಿಗಳು ಮುಂದಾಗಬೇಕು' ಎಂದು ಹೇಳಿದರು.

ಕೃಷಿ ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯದ ಚೆನ್ನೈನ ಪ್ರಾದೇಶಿಕ ಉಪ ಸಲಹೆಗಾರ ಮನೋಜ್ ಕುಮಾರ್ ಮಾತನಾಡಿ, `ಗುಣಮಟ್ಟದ ಆಹಾರ ಉತ್ಪನ್ನಗಳಿಗೆ ಮಾತ್ರ ಅಗ್‌ಮಾರ್ಕ್ ಮಾನ್ಯತೆ ನೀಡಲಾಗುತ್ತದೆ.

ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಗ್ರಾಮೀಣ ಭಾಗದಲ್ಲಿ ವೈಜ್ಞಾನಿಕವಾದ ಗೋದಾಮುಗಳ ನಿರ್ಮಾಣವಾಗಬೇಕು. ವೈಜ್ಞಾನಿಕವಾಗಿ ನಿರ್ಮಿಸಿದ ಗೋದಾಮುಗಳಿಂದ ಕೃಷಿ ಉತ್ಪನ್ನಗಳು ಬಹುಕಾಲ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ' ಎಂದರು.

`ರಾಜ್ಯದಲ್ಲಿ ತಲಾ 20 ಸಾವಿರ ಟನ್ ಸಂಗ್ರಹ ಸಾಮರ್ಥ್ಯದ ಸುಮಾರು 2,200 ಗೋದಾಮುಗಳಿವೆ. ಇನ್ನಷ್ಟು ಗೋದಾಮುಗಳ ಅಗತ್ಯ ರಾಜ್ಯಕ್ಕಿದೆ. ಕೇಂದ್ರ ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳಲ್ಲಿ ಗೋದಾಮುಗಳ ನಿರ್ಮಾಣಕ್ಕೆ ಸಹಾಯಧನ ಲಭ್ಯವಿದ್ದು, ರೈತರು ಹಾಗೂ ರೈತ ಸಮಾಜಗಳು ಇದರ ಸದುಪಯೋಗ ಪಡೆಯಬೇಕು' ಎಂದು ತಿಳಿಸಿದರು.

ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ ಪ್ರಾಧ್ಯಾಪಕ ಡಾ.ಪಿ.ಜಿ.ಚಂಗಪ್ಪ ಮಾತನಾಡಿ, `ಕೃಷಿ ಉತ್ಪನ್ನಗಳ ಗುಣಮಟ್ಟದ ವರ್ಗೀಕರಣ ಆಗಬೇಕು. ಇತ್ತೀಚೆಗೆ ಇ-ಟ್ರೇಡಿಂಗ್ ವ್ಯವಸ್ಥೆ ಎಲ್ಲ ಕ್ಷೇತ್ರಗಳಿಗೂ ಕಾಲಿಡುತ್ತಿದ್ದು, ಕೃಷಿ ಉತ್ಪನ್ನಗಳ ಮಾರಾಟವೂ ಇ-ಟ್ರೇಡಿಂಗ್ ಮೂಲಕ ಆಗುತ್ತಿದೆ.

ಹೀಗಾಗಿ ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ವರ್ಗೀಕರಣ ಅಗತ್ಯ. ರೈತರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೃಷಿ ಇಲಾಖೆ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳು ಮಾಡಬೇಕು' ಎಂದರು.

ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಲಾಗಿರುವ ವಸ್ತುಪ್ರದರ್ಶನದಲ್ಲಿ ಸುಮಾರು 30 ಆಹಾರ ಉತ್ಪನ್ನ ಕಂಪೆನಿಗಳು ಭಾಗವಹಿಸಿವೆ. ಪ್ರದರ್ಶನ ಫೆ.16ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.