ADVERTISEMENT

ಗೋಮಾಳವಲ್ಲ ಎಲ್ಲವೂ ಗೋಲ್‌ಮಾಲ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 20:10 IST
Last Updated 2 ಫೆಬ್ರುವರಿ 2011, 20:10 IST


ಬೆಂಗಳೂರು: ‘ವಿದೇಶದಲ್ಲಿ ನಮ್ಮವರ ಕೈಗೆ ಕೋಳ ತೊಡಿಸುತ್ತಾರೆ. ಆದರೆ ಅಲ್ಲಿಯವರು ಇಲ್ಲಿಗೆ ಬಂದರೆ ‘ಝಡ್’ ಮಾದರಿಯ ವಿಶೇಷ ಭದ್ರತೆ ನೀಡುತ್ತಾರೆ. ಒಟ್ಟಿನಲ್ಲಿ ನಮ್ಮದೆಲ್ಲವೂ ‘ನಾಮರ್ದ ಸರ್ಕಾರಗಳು’ ಎಂದು ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಬುಧವಾರ ಕಿಡಿ ಕಾರಿದರು.

ಕೋರ್ಟ್‌ಗೆ ಸರಿಯಾದ ದಾಖಲೆ ನೀಡದ ಕಾರಣಕ್ಕೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಖುದ್ದು ಹಾಜರಾಗದೇ ಇರುವುದಕ್ಕೆ ಅಥವಾ ಅರ್ಧಂಬರ್ಧ ಯೋಜನೆಗಳನ್ನು ರೂಪಿಸಿ ಜನಸಾಮಾನ್ಯರು ಕೋರ್ಟ್ ಮೆಟ್ಟಿಲೇರುವಂತೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಾರಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದಿರುವ ಇವರು, ಈಗ ಈ ರೀತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಮಾಳ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಮಾತು ದೇಶ, ವಿದೇಶದತ್ತ ಹೊರಳಿದಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.ಹಾಗೆಯೇ ಗೋಮಾಳ ಜಮೀನಿನಲ್ಲಿ ನಡೆಯುತ್ತಿರುವ ಸ್ವಾಧೀನ ಪ್ರಕ್ರಿಯೆಯ ಕುರಿತಾಗಿಯೂ ಅಸಮಾಧಾನ ವ್ಯಕ್ತಪಡಿಸಿದ ಶೈಲೇಂದ್ರಕುಮಾರ್ ಅವರು, ‘ಗೋಮಾಳ ಜಮೀನು ಗೋಲ್‌ಮಾಲ್ ಜಮೀನು ಆಗುತ್ತಿದೆ.ಗೋಮಾಳ ಜಮೀನಿನಲ್ಲಿ ನಡೆಯುವುದೆಲ್ಲವೂ ಗೋಲ್‌ಮಾಲ್ ಕೆಲಸಗಳೇ’ ಎಂದು ತೀಕ್ಷವಾಗಿ ನುಡಿದರು.

‘ಮರಕ್ಕೆ ತೊಂದರೆ ಆಗದಿರಲಿ’
ನಗರದ ರಾಮೋಹಳ್ಳಿ ಬಳಿ ಇರುವ ದೊಡ್ಡ ಆಲದ ಮರದ ಸಮೀಪ ಅಳವಡಿಸಲಾದ 400 ಕೆ.ವಿ. ಹೈಟೆನ್ಷನ್ ವಿದ್ಯುತ್ ತಂತಿಯಿಂದ ಮರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆಗದಂತೆ ನೋಡಿಕೊಳ್ಳಲು ಹೈಕೋರ್ಟ್ ಪಾಲಿಕೆಗೆ ಬುಧವಾರ ಆದೇಶಿಸಿದೆ.

ಈ ತಂತಿಯಿಂದ ಸುಮಾರು ನಾನೂರು ವರ್ಷ ಹಳೆಯದಾಗಿರುವ ಮರಕ್ಕೆ ಧಕ್ಕೆ ಉಂಟಾಗುವುದಾಗಿ ದೂರಿ 2006ರಲ್ಲಿ ಸ್ಥಳೀಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ತಂತಿಯು ಮರದಿಂದ 200ಮೀಟರ್ ದೂರ ಇರುವ ಕಾರಣ ಮರಕ್ಕೆ ಧಕ್ಕೆ ಆಗುವುದಿಲ್ಲ ಎಂದು ಪಾಲಿಕೆ ಪರ ವಕೀಲರು ತಿಳಿಸಿದರು. ‘ನಾಲ್ಕು ವರ್ಷಗಳಿಂದ ಇದುವರೆಗೆ ಯಾವುದೇ ರೀತಿಯ ತೊಂದರೆ ಮರಕ್ಕೆ ಆಗಲಿಲ್ಲ. ಇದೇ ರೀತಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಸೂಚಿಸಿತು.

ಬಡ್ತಿಗೆ ಮಧ್ಯಂತರ ತಡೆ
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿಗಳ ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ತಯಾರು ಮಾಡಿರುವ ಪಟ್ಟಿಯ ಅನ್ವಯ ಮುಂದಿನ ಆದೇಶದವರೆಗೆ ಬಡ್ತಿ ನೀಡದಂತೆ ಹೈಕೋರ್ಟ್ ಬುಧವಾರ ಸೂಚಿಸಿದೆ.2008ರ ಮಾರ್ಚ್ 24ರಂದು ತಾತ್ಕಾಲಿಕ ಪಟ್ಟಿಯನ್ನು ಮಂಡಳಿ ತಯಾರಿಸಿರುವುದನ್ನು ಪ್ರಶ್ನಿಸಿ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಎ.ರಮೇಶ್ ಅವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿ ಪಟ್ಟಿ ತಯಾರು ಮಾಡಲಾಗಿದೆ ಎನ್ನುವುದು ಅರ್ಜಿದಾರರ ದೂರು. ಆದರೆ ಪಟ್ಟಿಯನ್ನು ಏಕಸದಸ್ಯಪೀಠ ಊರ್ಜಿತಗೊಳಿಸಿತ್ತು. ಇದನ್ನು ಮೇಲ್ಮನವಿ ಮೂಲಕ ಪ್ರಶ್ನಿಸಲಾಗಿದೆ.

ತ್ಯಾಜ್ಯ ವಿಲೇವಾರಿ; ಟೆಂಡರ್‌ಗೆ ತಡೆ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕರೆದಿರುವ ಬಹುಕೋಟಿ ಟೆಂಡರ್ ಪ್ರಕ್ರಿಯೆ ಅನ್ವಯ ಕೋರ್ಟ್‌ನ ಮುಂದಿನ ಆದೇಶವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಟೆಂಡರ್ ಪ್ರಕ್ರಿಯೆಯನ್ನು ಕೇವಲ ಕಂಪೆನಿಗಳಿಗೆ ಸೀಮಿತಗೊಳಿಸಿ ಕಳೆದ ಜ.13ರಂದು ಪಾಲಿಕೆ ನಿರ್ಣಯ ಮಂಡಿಸಿರುವುದನ್ನು ಪ್ರಶ್ನಿಸಿ ಹಲವು ಗುತ್ತಿಗೆದಾರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಈ ಆದೇಶ ಹೊರಡಿಸಿದ್ದಾರೆ.ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವಂತೆ ಪಾಲಿಕೆಯ ಪರ ವಕೀಲರಿಗೆ ಅವರು ಸೂಚಿಸಿದರು.

ಕೋರ್ಟ್ ತರಾಟೆ: ಟೆಂಡರ್ ಅನ್ನು ಕೇವಲ ಕಂಪೆನಿಗಳಿಗೆ ಸೀಮಿತಗೊಳಿಸಿರುವುದನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದರು. ‘ಈ ರೀತಿ ನಿಯಮ ಉಲ್ಲಂಘಿಸಿ ಪಾಲಿಕೆ ನಡೆದುಕೊಳ್ಳುವುದು ಏಕೆ? ಗುತ್ತಿಗೆದಾರರಿಗೆ ವಂಚನೆ ಮಾಡುವುದು ಸರಿಯಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿ ಎಂಬುದು ಅದರ ಉದ್ದೇಶವಾಗಿದೆ. ಮೂಲ ಉದ್ದೇಶವನ್ನೇ ಬಿಟ್ಟು ಒಂದು ವರ್ಗಕ್ಕೆ ಸೀಮಿತಗೊಳಿಸುವಲ್ಲಿ ಅರ್ಥವೇನಿದೆ’ ಎಂದು ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡರು.

ಕಂಪೆನಿಗಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಅರ್ಹತೆ ಇರುವ ಕಾರಣ, ಪಾಲಿಕೆಯಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಲಿಕೆ ಪರ ವಕೀಲರು ಹೇಳಿದರು. ಇದರಿಂದ ಅಸಮಾಧಾನಗೊಂಡ ನ್ಯಾ. ನಾಗರತ್ನ ‘ಯಾರು ಅರ್ಹರು, ಯಾರು ಅನರ್ಹರು ಎಂದು ಹೇಗೆ ನಿರ್ಧಾರ ಮಾಡುತ್ತೀರಿ. ನಿಯಮ ಪಾಲನೆ ಮಾಡುವುದು ಬಿಟ್ಟು ಅರ್ಹತೆಯನ್ನು ನೋಡುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.