ADVERTISEMENT

ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 19:40 IST
Last Updated 6 ಜೂನ್ 2017, 19:40 IST
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು   

ಬೆಂಗಳೂರು: ಯಲಹಂಕ ಸಮೀಪದ ಗ್ರಾಮಗಳಲ್ಲಿನ ಸರ್ಕಾರಿ ಕಲ್ಲಿನ ಕ್ವಾರಿಯಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮ ವಿರೋಧಿಸಿ ಸುತ್ತಮುತ್ತಲ ಗ್ರಾಮಸ್ಥರು ಮಂಗಳವಾರ ಬೆಳ್ಳಹಳ್ಳಿ ಕಸ ವಿಲೇವಾರಿ ಸ್ಥಳದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಿದರು.

ಧರಣಿ ಬೆಂಬಲಿಸಿ ಮಿಟ್ಟಗಾನಹಳ್ಳಿ, ಕಣ್ಣೂರು, ಕೋಗಿಲು ಬಡಾವಣೆ, ಬೆಳ್ಳಹಳ್ಳಿ, ಶ್ರೀನಿವಾಸಪುರ, ಸಾತನೂರು, ಬಾಗಲೂರು, ಚಿಕ್ಕಗುಬ್ಬಿ  ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ತಮ್ಮ ಗ್ರಾಮಗಳಿಂದ ಬಂದಿದ್ದರು.

‘ಸುಮಾರು ಒಂದೂವರೆ ವರ್ಷದಿಂದ ಬಿಬಿಎಂಪಿ ಈ ಕಲ್ಲುಕ್ವಾರಿಗಳಲ್ಲಿ ಕಸ ವಿಲೇವಾರಿ ಮಾಡುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶಗಳ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ವಿರೋಧಿಸಿ ಅನೇಕ ಭಾರಿ ಪ್ರತಿಭಟನೆ ನಡೆಸಿದ್ದೇವೆ. ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿ, ಸಮಸ್ಯೆ ಬಗೆಹರಿಸಲು ಕೋರಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

‘ವಿಂಗಡಣೆ ಮಾಡಿದ ಕಸವನ್ನು ಮಾತ್ರ ವಿಲೇವಾರಿ ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ನಂತರ ಎಲ್ಲ ರೀತಿಯ ತ್ಯಾಜ್ಯವನ್ನು ಒಟ್ಟಿಗೆ ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಸುಮಾರು ಎರಡು ಕಿಲೊ ಮೀಟರ್‌ ದೂರದವರೆಗೆ ದುರ್ವಾಸನೆ ಬರುತ್ತದೆ. ಸುತ್ತಮುತ್ತಲ ಗ್ರಾಮಸ್ಥರು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಗ್ರಾಮಗಳನ್ನು ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕಣ್ಣೂರು ಗ್ರಾಮದ ನಿವಾಸಿ ಚಂದ್ರು ದೂರಿದರು.

‘ಕಸ ಸುರಿಯುತ್ತಿರುವ ಜಾಗದಿಂದ ಸ್ವಲ್ಪ ದೂರದಲ್ಲಿ ಬೆಳ್ಳಹಳ್ಳಿ ಹಾಗೂ ಕಣ್ಣೂರು ಕೆರೆಗಳಿವೆ. ಕ್ವಾರಿಗಳ ಮೂಲಕ ವಿಷಯುಕ್ತ ನೀರು ಕೆರೆ ಸೇರುತ್ತಿದೆ. ಈ ನೀರನ್ನು ಸೇವಿಸಿದ್ದರಿಂದ ಜಾನುವಾರುಗಳು  ಮೃತಪಟ್ಟಿದ್ದು, ಅಂತರ್ಜಲವೂ ಕಲುಷಿತಗೊಂಡಿದೆ. ಕೊಳವೆ ಬಾವಿಗಳಿಂದ ವಿಷಯುಕ್ತ ನೀರು ಹೊರಬರುತ್ತಿರುವುದರಿಂದ ಜನರು ವಿವಿಧ ಕಾಯಿ ಲೆಗಳಿಂದ ಬಳಲುತ್ತಿದ್ದಾರೆ’ ಎಂದು ಸ್ಥಳೀಯರಾದ ನಂಜೇಗೌಡ ಹೇಳಿದರು.

‘ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದೃಢಪಡಿಸಿದ್ದು, ವಿಲೇವಾರಿ ಮಾಡಿರುವ ಕಸವನ್ನು ಸ್ಥಳಾಂತರಿಸಬೇಕು ಎಂದೂ ಹೇಳಿದೆ. ಆದರೂ, ಬಿಬಿಎಂಪಿ ಪ್ರತಿನಿತ್ಯ ಲೋಡ್‌ಗಟ್ಟಲೆ ಕಸವನ್ನು ತಂದು ಇಲ್ಲಿ ಸುರಿಯುತ್ತಿದೆ. ಇದನ್ನು ನಿಲ್ಲಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.