ADVERTISEMENT

ಚರಿತ್ರೆ ರಚನೆಗೆ ಕಾವ್ಯ ನೆರವು: ಹಿರಿಯ ಸಂಶೋಧಕ ಚಿದಾನಂದಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST

ಬೆಂಗಳೂರು: ಅಪ್ರಕಟಿತ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯ ಸಾವಿರಾರು ವಿವರಗಳು ಹುದುಗಿರುವ ಸಾಧ್ಯತೆಯಿದೆ. ಅವುಗಳನ್ನು ಬೆಳಕಿಗೆ ತರುವುದರಿಂದ ನಾಡಿನ ಸಾಮಾಜಿಕ ಚರಿತ್ರೆಯನ್ನು ಇನ್ನಷ್ಟು ಸ್ಪ್ಪಷ್ಟವಾಗಿ ರೂಪಿಸಬಹುದು ಎಂದು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಹೇಳಿದರು.

ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಹಿರಿಯ ವಿದ್ವಾಂಸ ಎನ್. ಬಸವಾರಾಧ್ಯ ಅವರು ಸಂಪಾದಿಸಿರುವ 17ನೇ ಶತಮಾನದ ಕವಿ ಕರಿಯ ಸಿದ್ಧೇಶ ವಿರಚಿತ  ಪ್ರಬೋಧ ಚಂದ್ರೋದಯ  ಕಾವ್ಯವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ವರ್ಣವ್ಯವಸ್ಥೆಯೂ ಸೇರಿ ಹಲವು ಸಾಮಾಜಿಕ ಸಂಗತಿಗಳ ಬಗ್ಗೆ ಹೊಸ ವಿವರಗಳನ್ನು ಒದಗಿಸುವ ಈ ಕಾವ್ಯ ಸಂಶೋಧಕರಿಗೆ ಅಚ್ಚರಿ ಹುಟ್ಟಿಸುತ್ತದೆ, ಅವುಗಳ ಬಗ್ಗೆ ಲೇಖನ ಬರೆಯಲು ನನಗೇ ಹುಮ್ಮಸ್ಸು ಬಂದಿದೆ ಎಂದರು.
ಗ್ರಂಥ ಸಂಪಾದನೆ ಶಾಸ್ತ್ರಕ್ಕೆ ಗುರುವಾಗಿದ್ದ ಡಿ.ಎಲ್. ನರಸಿಂಹಾಚಾರ್ ಅವರು ಅರವತ್ತು ವರ್ಷಗಳ ಹಿಂದೆ ಇದರ ಹಸ್ತಪ್ರತಿಯನ್ನು ತಮ್ಮ ಪ್ರಿಯ ಶಿಷ್ಯ ಬಸವಾರಾಧ್ಯ ಅವರಿಗೆ ಕೊಟ್ಟಿದ್ದರು. ಈಗಲಾದರೂ ಅದು ಪ್ರಕಟವಾಗಿರುವುದಕ್ಕೆ ಡಿಎಲ್‌ಎನ್ ಅವರ ಆತ್ಮ ತೃಪ್ತಿ ಪಡುತ್ತದೆ ಎಂದರು.

ADVERTISEMENT

ಕೃತಿಯನ್ನು ಕುರಿತು ಮಾತನಾಡಿದ ಸಾಹಿತಿ ಪ್ರೊ ಅ.ರಾ. ಮಿತ್ರ ಅವರು ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಕುರಿತು ಪ್ರಜ್ಞೆ ಮೂಡಿಸುವುದೇ ಎಲ್ಲ ಕಾವ್ಯದ ಉದ್ದೇಶ.  ಪ್ರಬೋಧ ಚಂದ್ರೋದಯ  ದಲ್ಲಿ ಇದು ರೂಪಕಾತ್ಮಕವಾಗಿ ನಿರೂಪಿತವಾಗಿದೆ. ಈ ಕಾವ್ಯ ಸಂಸ್ಕೃತದ ಅನುಕರಣೆ ಅನ್ನಿಸದೆ ಸ್ವತಂತ್ರ ಕೃತಿಯಂತೆ ತೋರುತ್ತದೆ ಎಂದರು.

ಕೃತಿಯ ಸಂಪಾದಕರಾದ ಹಿರಿಯ ವಿದ್ವಾಂಸ ಎನ್. ಬಸವಾರಾಧ್ಯ ಅವರು ಮಾತನಾಡಿ, ತಮ್ಮ ಗುರುಗಳ ಆದೇಶವನ್ನು ತಡವಾಗಿಯಾದರೂ ನಡೆಸಿರುವುದಕ್ಕೆ ಸಮಾಧಾನವಾಗಿದೆ ಎಂದರು. ಆದರೆ ಕನ್ನಡ ನಾಡಿನ ಮನೆಗಳಲ್ಲಿ, ಮಠಗಳಲ್ಲಿ ಲಕ್ಷಾಂತರ ಹಸ್ತಪ್ರತಿಗಳು ಇನ್ನೂ ಬೆಳಕು ಕಾಣದೆ ಉಳಿದಿವೆ. ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಹಸ್ತಪ್ರತಿಗಳೇ ನೂರಾರಿವೆ. ಗ್ರಂಥ ಸಂಪಾದನೆ ಮಾಡಬಲ್ಲ ವಿದ್ವಾಂಸರನ್ನು ತಯಾರು ಮಾಡಲು ಮತ್ತು ಈ ಹಸ್ತಪ್ರತಿಗಳನ್ನು ಮುದ್ರಣಕ್ಕೆ ಸಿದ್ಧಪಡಿಸಲು ಒಂದು ಹಸ್ತಪ್ರತಿ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ವೀರಣ್ಣ ಅವರು ಇಂಥ ಇನ್ನೂ ಹಲವು ಅಪರೂಪದ ಗ್ರಂಥಗಳನ್ನು ಪ್ರಕಟಿಸುವ ಯೋಜನೆಯಿದೆ ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಎಲ್.ಎನ್. ಮುಕುಂದರಾಜ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.