ADVERTISEMENT

ಚುನಾವಣಾ ಸಿದ್ಧತೆಗೆ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಾಗೆ ಆಡಳಿತಾರೂಢ ಬಿಜೆಪಿ ಕೂಡ ಚುನಾವಣೆಗೆ ಸಿದ್ಧತೆ ನಡೆಸಿದೆ. ಸಹಿ ಸಂಗ್ರಹ ಸೇರಿದಂತೆ ಕಿತ್ತಾಟ ಬಿಟ್ಟು ಒಗ್ಗಟ್ಟಿನಿಂದ ಮುಂದಿನ ಚುನಾವಣೆ ಗೆಲ್ಲುವುದಕ್ಕೆ ಏನೇನು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಸೋಮವಾರ ನಡೆದ ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬೆಳಿಗ್ಗೆ ನಡೆದ ಪ್ರಮುಖರ ಸಭೆ ಹಾಗೂ ಸಂಜೆ ಜರುಗಿದ ಸಚಿವರ ಸಭೆಯಲ್ಲಿ ಚುನಾವಣಾ ತಯಾರಿ ಬಗ್ಗೆಯೇ ಹೆಚ್ಚು ಚರ್ಚಿಸಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಸಚಿವರು ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಒಟ್ಟು 224 ಕ್ಷೇತ್ರಗಳ ಪೈಕಿ ಇನ್ನೂ 103 ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳ ಶಾಸಕರಿದ್ದು, ಈ ಕ್ಷೇತ್ರಗಳಲ್ಲೂ ಪಕ್ಷ ಸಂಘಟಿಸುವ ಕೆಲಸಕ್ಕೆ ಕೈಹಾಕಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗೆಲ್ಲುವುದಕ್ಕೆ ಪೂರಕವಾಗಿ ಕಾರ್ಯತಂತ್ರ ರೂಪಿಸಲು ನಿರ್ಧರಿಸಲಾಗಿದೆ.

ಯಡಿಯೂರಪ್ಪ ಬೆಂಬಲಿಗ ಸಚಿವರು ತಮ್ಮ ನಾಯಕರನ್ನು ಕಡೆಗಣಿಸದಂತೆ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ಅಲ್ಲದೆ, ಯಾವುದೇ ನೇಮಕದ ಸಂದರ್ಭದಲ್ಲೂ ಪಕ್ಷದ ಪ್ರಮುಖರು ಸೇರಿಯೇ ತೀರ್ಮಾನ ತೆಗೆದುಕೊಳ್ಳಬೇಕು. ಉಪ ಲೋಕಾಯುಕ್ತರನ್ನು ನೇಮಕ ಮಾಡಿದ ಮರುದಿನವೇ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
 
ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದು ಯಡಿಯೂರಪ್ಪ ಪರ ಸಚಿವರು ಒತ್ತಾಯಿಸಿದ್ದಾರೆ.ಇದುವರೆಗೂ ಆಗಿರುವ `ಕಹಿ~ ಘಟನೆಗಳನ್ನು ಮರೆತು ಎಲ್ಲರೂ ಪಕ್ಷ ಸಂಘಟನೆ ಕಡೆಗೆ ಗಮನ ನೀಡಬೇಕು. ಕಿತ್ತಾಡಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹೇಳಹೆಸರಿಲ್ಲದಂತೆ ಆಗುತ್ತದೆ. ಪಕ್ಷ ಮತ್ತು ಸರ್ಕಾರ ಎರಡನ್ನೂ ಉಳಿಸಿಕೊಂಡು ಹೋಗುವ ಅಗತ್ಯ ಇದೆ.

ಅದಕ್ಕೆ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದೂ ಕೆಲ ಸಚಿವರು ಅಭಿಪ್ರಾಯಪಟ್ಟರು.
ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನಪರವಾದ ಬಜೆಟ್ ಮಂಡಿಸಬೇಕು. ರೈತರ ಪರವಾಗಿ ಇರಬೇಕು. ಈ ಸಂಬಂಧ ಇಲಾಖಾವಾರು ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಸಹಿ ಸಂಗ್ರಹ ಬೇಡ: ಕೆಲವರು ಯಡಿಯೂರಪ್ಪ ಪರ ಸಹಿ ಸಂಗ್ರಹಿಸುತ್ತಿದ್ದಾರೆ ಎನ್ನುವ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಇದಕ್ಕೆ ಸ್ವತಃ ಯಡಿಯೂರಪ್ಪ ಅವರೇ ಪ್ರತಿಕ್ರಿಯೆ ನೀಡಿ, ಅಂತಹ ಚಟುವಟಿಕೆ ಯಾವ ಕಾರಣಕ್ಕೂ ನಡೆಸಬಾರದು ಎಂದು ಸೂಚಿಸಿದ್ದಾರೆ. ಒಂದು ವೇಳೆ ಆ ರೀತಿ ಯಾರಾದರೂ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. `ಅಧ್ಯಕ್ಷರು ಕರೆದು ಮಾತನಾಡಲಿ~ ಎಂದು ಯಡಿಯೂರಪ್ಪ ಅವರೇ ಹೇಳಿದರು ಎನ್ನಲಾಗಿದೆ.

ಅಭ್ಯರ್ಥಿ ಆಯ್ಕೆ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಮುಖಂಡರಾದ ಸುನಿಲ್ ಕುಮಾರ್ ಅಥವಾ ಉದಯಕುಮಾರ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಇದರ ಜತೆಗೆ ಚುನಾವಣೆಗೂ ಮುನ್ನವೇ ವಿಧಾನಸಭಾ ಕ್ಷೇತ್ರವಾರು ಸಮಾವೇಶಗಳನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೇಂದ್ರದ ವಿರುದ್ಧ ಪ್ರತಿಭಟನೆ: ರಸಗೊಬ್ಬರ ಸಮಸ್ಯೆ ಸೇರಿದಂತೆ ಕೇಂದ್ರ ಸರ್ಕಾರದ ನೀತಿ ವಿರುದ್ಧ ಸರಣಿ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂದುಳಿದವರ ಮೀಸಲಾತಿ ಕೋಟಾದಲ್ಲಿ ಶೇ.4.5ರಷ್ಟು ಕಡಿತ ಮಾಡಿ, ಅದನ್ನು ಅಲ್ಪಸಂಖ್ಯಾತರಿಗೆ ನೀಡಿರುವುದರ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ತೀರ್ಮಾನಗಳು
 

* ಫೆ.11ರಂದು ಬೆಳಗಾವಿ, ವಿಜಾಪುರದಲ್ಲಿ ವಿಭಾಗೀಯ ಮಟ್ಟದ ಸಮಾವೇಶ

* ಫೆ.24, 25ರಂದು ಶಾಸಕರು, ಸಂಸದರಿಗೆ ಮಂಥನ ಶಿಬಿರ

* ಮಾರ್ಚ್ 1, 2ರಂದು ಮಂಗಳೂರಿನಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ

* ಮಾರ್ಚ್, ಏಪ್ರಿಲ್‌ನಲ್ಲಿ ವಿವಿಧ ಮೋರ್ಚಾಗಳ ಸಮಾವೇಶ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.