ADVERTISEMENT

ಜನಪರ ಬಜೆಟ್ ಮಂಡನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಬೆಂಗಳೂರು: ರೈತರು ಹಾಗೂ ಕಾರ್ಮಿಕರ ಸಲಹೆ ಪಡೆದು ಸರ್ಕಾರ ವಾರ್ಷಿಕ ಬಜೆಟ್ ಮಂಡಿಸಬೇಂದು ಒತ್ತಾಯಿಸಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಕಾರ್ಯದರ್ಶಿ ಪಿ.ವಿ.ಲೋಕೇಶ್ ಮಾತನಾಡಿ~ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಜೆಟ್ ಮಂಡನೆಗೆ  ಪೂರ್ವಭಾವಿಯಾಗಿ ಕೇವಲ ಶ್ರೀಮಂತ ವರ್ಗದವರೊಂದಿಗೆ ಸಭೆ ನಡೆಸಿ ಅವರ ಸಲಹೆ ಪಡೆಯುತ್ತಿವೆ. ಆದರೆ ದೇಶಕ್ಕೆ ಪರೋಕ್ಷವಾಗಿ ತೆರಿಗೆದಾರರಾಗಿರುವ ರೈತರು ಹಾಗೂ ಕಾರ್ಮಿಕರ ಅಭಿಪ್ರಾಯಗಳನ್ನು ಪಡೆಯಲು ಹಿಂದೇಟು ಹಾಕುತ್ತಿರುವುದು ಖಂಡನೀಯ~ ಎಂದು ಆರೋಪಿಸಿದರು.

ಸರ್ಕಾರದ ಈ ನೀತಿಯಿಂದ ಸಾಮಾನ್ಯ ಜನತೆಗೆ ಅಗತ್ಯವಾದ ಆಯವ್ಯಯ ಮಂಡನೆಯಾಗುತ್ತಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಬರಪೀಡಿತ ಪ್ರದೇಶಗಳ ರೈತರ ಸಾಲ ಮನ್ನಾ ಮಾಡಿ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಮೂಲಭೂತ ಸೌಲಭ್ಯ ನೀಡಲು ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂಬ  ಬೇಡಿಕೆಗಳಿಗೆ ಒತ್ತಾಯಿಸಿದರು.

ಅಕ್ರಮ ಗಣಿಗಾರಿಕೆ ಬಗ್ಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ವರದಿಯನ್ನು ಜಾರಿಗೆ ತಂದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಮರ್ಥ ಲೋಕಾಯುಕ್ತರ ನೇಮಕಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.