ADVERTISEMENT

ಜನರ ಮನಃಸ್ಥಿತಿ ಬದಲಾಗಬೇಕು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2011, 19:30 IST
Last Updated 29 ನವೆಂಬರ್ 2011, 19:30 IST
ಜನರ ಮನಃಸ್ಥಿತಿ ಬದಲಾಗಬೇಕು
ಜನರ ಮನಃಸ್ಥಿತಿ ಬದಲಾಗಬೇಕು   

ಬೆಂಗಳೂರು: `ಎಷ್ಟೇ ತೀವ್ರತರವಾದ ಕಾನೂನುಗಳನ್ನು ಜಾರಿಗೊಳಿಸಿದರೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯವಿಲ್ಲ. ಬದಲಿಗೆ, ಇರುವ ಕಾನೂನುಗಳನ್ನೇ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ~ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಂಗಳವಾರ ಇಲ್ಲಿ ಅಭಿಪ್ರಾಯಪಟ್ಟರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧದ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ನಮ್ಮ ದೇಶದಲ್ಲಿ ಕಾನೂನು ರೂಪಿಸುವುದೇ ಎಲ್ಲದಕ್ಕೂ ಪರಿಹಾರ ಎಂಬ ಚಿಂತನೆ ಬೆಳೆದಿದೆ. ಕೇವಲ ಕಾನೂನು ರೂಪಿಸುವುದರಿಂದಲೇ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇರುವ ಕಾನೂನುಗಳನ್ನೇ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಾಗಿದೆ~ ಎಂದರು.

ಮಹಿಳೆಯರ ಮೇಲೆ ನಡೆಯುತ್ತಿರುವ ವಿವಿಧ ಮಾದರಿಯ ದೌರ್ಜನ್ಯಗಳ ಬಗ್ಗೆ ಪ್ರಸ್ತಾಪಿಸಿದ ಅವರು, `ಸಾಮಾಜಿಕ ಭದ್ರತೆಯಿಲ್ಲದ ಆರ್ಥಿಕ ಭದ್ರತೆ ಸಮಾಜಕ್ಕೆ ಮಾರಕ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರಷ್ಟೇ ಸಾಲದು. ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಬೇಕಿದೆ~ ಎಂದು ಪ್ರತಿಪಾದಿಸಿದರು.

ಮನಸ್ಥಿತಿ ಬದಲಾಗಬೇಕು: `ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಎಷ್ಟೇ ಕಾನೂನುಗಳನ್ನು ರಚಿಸುವುದು ಅಥವಾ ಶಾಸನಸಭೆಗಳು ಮಧ್ಯಪ್ರವೇಶ ಮಾಡುವುದರಿಂದ ಪ್ರಯೋಜನವಾಗದು. ಬದಲಿಗೆ, ಇಡೀ ಜನರ ಮನಸ್ಥಿತಿ ಬದಲಾಗಬೇಕು. ಅಲ್ಲದೆ, ಇಡೀ ವಿಶ್ವದಲ್ಲಿ ಮಹಿಳೆಯರು ಜಾಗೃತರಾಗಿ ಸಂಘಟಿತ ಹೋರಾಟ ನಡೆಸುವುದರಿಂದ ದೌರ್ಜನ್ಯವನ್ನು ತಡೆಯಬಹುದು~ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಪ್ರತಿಪಾದಿಸಿದರು.

`ಮಹಿಳೆಯರ ಮೇಲಿನ ದೌರ್ಜನ್ಯ ಇಂದು-ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಅದು ಮುಂದುವರಿದುಕೊಂಡು ಬಂದಿದೆ. ಅನಕ್ಷರತೆ, ಬಡತನ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ವಿವಾಹ ಮತ್ತಿತರ ಕಾರಣಗಳಿಂದ ಮಹಿಳೆ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಆರ್ಥಿಕವಾಗಿ ಸಬಲಳಾದರೂ ಪುರುಷ ಸಹಿಸುತ್ತಿಲ್ಲ. ಹೆಣ್ಣಿನ ಆದಾಯದ ಮೇಲೆ ನಿಯಂತ್ರಣ ಸಾಧಿಸಲು ಪುರುಷ ಪ್ರಯತ್ನಿಸುತ್ತಿರುವುದರಿಂದ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ~ ಎಂದರು.

`ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವಂತಹ ಆರೋಪಿಗಳಿಗೆ ತಡವಾಗಿ ಮರಣದಂಡನೆಯಂತಹ ಶಿಕ್ಷೆ ನೀಡುವ ಬದಲು ತಕ್ಷಣ ಕಠಿಣ ಶಿಕ್ಷೆ ವಿಧಿಸುವಂತಹ ವ್ಯವಸ್ಥೆ ಜಾರಿಯಾಗಬೇಕು. ಇದರಿಂದ ಸ್ವಲ್ಪ ಮಟ್ಟಿಗಾದರೂ ದೌರ್ಜನ್ಯ ತಡೆಯಲು ಸಾಧ್ಯವಾಗಬಹುದು~ ಎಂದರು.

ಕಾನೂನು ಸಾಕು, ಮೊದಲು ಹಿಂಸೆ ನಿಲ್ಲಿಸಿ: `ಮಹಿಳೆಯರ ಮೇಲೆ ದೌರ್ಜನ್ಯ ತಡೆಗಟ್ಟುವಂತಹ ಕಾನೂನುಗಳು ಸಾಕು. ಮೊದಲು ಹಿಂಸೆ ತಡೆಗಟ್ಟಿ ಮಹಿಳೆ ನೆಮ್ಮದಿಯಿಂದ ಬದುಕುವಂತಹ ಒಳ್ಳೆಯ ಸಮಾಜ ನಿರ್ಮಿಸಬೇಕಾಗಿದೆ~ ಎಂದು ಲೇಖಕಿ ವೈದೇಹಿ ಹೇಳಿದರು.

`ಶೂರ್ಪನಖಿಯ ಮೂಗು ಕತ್ತರಿಸುವುದರಿಂದಲೇ ಮಹಿಳೆ ಮೇಲಿನ ದೌರ್ಜನ್ಯ ಆರಂಭವಾಯಿತು. ಈಗಲೂ ಅತ್ಯಾಚಾರಕ್ಕೆ ಒಳಗಾದಂತಹ ಮಹಿಳೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ಪಾಟಿ ಸವಾಲಿಗೆ ಒಳಪಡಿಸುವಂತಹ ಪರಿಸ್ಥಿತಿ ಮುಂದುವರಿದಿದೆ~ ಎಂದರು.

ನಿರ್ಣಯ ಅಂಗೀಕಾರ: ಸಮಾವೇಶದಲ್ಲಿ ಈಶಾನ್ಯ ರಾಜ್ಯಗಳಲ್ಲಿ ವಿಶೇಷವಾಗಿ ಅಸ್ಸಾಂ ಹಾಗೂ ಮಣಿಪುರ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಸೇನಾ ಪಡೆಗಳ ದೌರ್ಜನ್ಯ ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತಲ್ಲದೆ, ಸೇನಾ ಪಡೆಗಳಿಗೆ ನೀಡಿರುವ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು. ಸೇನಾ ಪಡೆಗಳ ದೌರ್ಜನ್ಯದ ವಿರುದ್ಧ 12 ವರ್ಷಗಳಿಂದ ಮಣಿಪುರದಲ್ಲಿ ಹೋರಾಟ ನಡೆಸುತ್ತಿರುವ ಐರೋಮ್ ಶರ್ಮಿಳಾ ಹೋರಾಟಕ್ಕೆ ಸಮಾವೇಶ ಬೆಂಬಲ ಸೂಚಿಸಿತು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷೆ ಛಾಯಾ ಮುಖರ್ಜಿ, ಪ್ರಧಾನ ಕಾರ್ಯದರ್ಶಿ ಡಾ.ಎಚ್.ಜಿ. ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.