ADVERTISEMENT

ಜಾಗೃತಿ ನೆಪದಲ್ಲಿ ಸರ ಕದ್ದ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 19:47 IST
Last Updated 2 ಮಾರ್ಚ್ 2019, 19:47 IST

ಬೆಂಗಳೂರು: ಸರಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಂದ ₹1.30 ಲಕ್ಷ ಮೊತ್ತದ ಚಿನ್ನದ ಸರ ಪಡೆದುಕೊಂಡಿದ್ದ ದುಷ್ಕರ್ಮಿಯೊಬ್ಬ, ಆ ಸರದ ಸಮೇತ ಪರಾರಿಯಾಗಿದ್ದಾನೆ.

ಆ ಸಂಬಂಧ ಕೊಡಿಗೇಹಳ್ಳಿ ಲೇಔಟ್‌ ನಿವಾಸಿ ಜಿ.ಶಶಿಕಲಾ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಶಶಿಕಲಾ ಅವರು ಸ್ಥಳೀಯ ನಿವಾಸಿ ಲಕ್ಷ್ಮಮ್ಮ ಎಂಬುವರ ಜೊತೆ ಮನೆ ಎದುರಿನ ಮರದ ನೆರಳಿನಲ್ಲಿ ಕುರ್ಚಿ ಹಾಕಿಕೊಂಡು ಕುಳಿತುಕೊಂಡಿದ್ದರು. ಸ್ಕೂಟರ್‌ನಲ್ಲಿ ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿ, ‘ನಾನು ಪೊಲೀಸ್‌. ಮಫ್ತಿಯಲ್ಲಿ ಓಡಾಡಿ ಸರಗಳವು ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಪಕ್ಕದ ರಸ್ತೆಯಲ್ಲಿ ಮಹಿಳೆಯೊಬ್ಬರ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಆ ಕಳ್ಳರು, ನಿಮ್ಮ ಬಳಿಯೂ ಬರಬಹುದು. ನಿನ್ನ ಸರವನ್ನು ಜೋಪಾನವಾಗಿಟ್ಟುಕೊಳ್ಳಿ’ ಎಂಬುದಾಗಿ ಹೇಳಿದ್ದ’ ಎಂದು ಕೊಡಿಗೇಹಳ್ಳಿ ಪೊಲೀಸರು ಹೇಳಿದರು.

ADVERTISEMENT

‘ಆತನ ಮಾತು ನಂಬಿದ್ದ ಶಶಿಕಲಾ, ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಕೈಯಲ್ಲಿ ಹಿಡಿದುಕೊಂಡಿದ್ದರು. ಆಗ ಆರೋಪಿ, ‘ಕಳ್ಳರು, ಸರವನ್ನು ಹೇಗೆ ಕಳ್ಳತನ ಮಾಡುತ್ತಾರೆ ಎಂಬುದನ್ನು ತೋರಿಸುತ್ತೇನೆ. ನಿಮ್ಮ ಕೈಯಲ್ಲಿರುವ ಸರವನ್ನು ನನಗೆ ಕೊಡಿ’ ಎಂದು ಪಡೆದುಕೊಂಡಿದ್ದ. ನಂತರ, ಜಾಗೃತಿ ಮೂಡಿಸಿದಂತೆ ನಟಿಸಿ ಸರದ ಸಮೇತ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.