ADVERTISEMENT

ಜಾತಿವಾದದ ಮಠ: ಎಚ್ಚರ ವಹಿಸಲು ಚಿಂತಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST
ಜಾತಿವಾದದ ಮಠ: ಎಚ್ಚರ ವಹಿಸಲು ಚಿಂತಕರಿಗೆ ಸಲಹೆ
ಜಾತಿವಾದದ ಮಠ: ಎಚ್ಚರ ವಹಿಸಲು ಚಿಂತಕರಿಗೆ ಸಲಹೆ   

ಬೆಂಗಳೂರು: ‘ಕೋಮು ಸೌರ್ಹಾದದ ಮುಖವಾಡ ಧರಿಸಿ ಜಾತಿವಾದವನ್ನು ಪ್ರತಿಪಾದಿಸುವ ಮಠಗಳ ಕುರಿತು ಪ್ರಗತಿಪರ ಚಿಂತಕರು ಎಚ್ಚರಿಕೆ ವಹಿಸಬೇಕು’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಕಿವಿಮಾತು ಹೇಳಿದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೋಮುವಾದ, ಭಯೋತ್ಪಾದನೆ, ಹಾಗೂ ಪ್ರಜಾಪ್ರಭುತ್ವ: ಆತಂಕಕಾರಿ ಹೊಸ ವಿದ್ಯಮಾನಗಳ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೋಮುವಾದ ವಿರೋಧಿಸುವುದರ ಜತೆಗೆ ಸಮಾಜದಲ್ಲಿ ಜಾಗೃತವಾಗಿರುವ ಜಾತಿವಾದ ಪ್ರಜ್ಞೆ ತೊಡೆದುಹಾಕಬೇಕು.ವೈದಿಕ ವಾದವೇ ಕೋಮುವಾದವಲ್ಲ. ಬ್ರಾಹ್ಮಣರನ್ನು ವಿರೋಧಿಸುವವರೆಲ್ಲಾ ಪ್ರಗತಿ ಪರ ಚಿಂತಕರಲ್ಲ. ಸಂಘ ಪರಿವಾರ ವೈದಿಕರ ಹಿಡಿತದಲ್ಲಿದೆ ಎಂದು ಮಠಾಧೀಶರು ಕೋಮು ಸೌಹಾರ್ದರೆಂದು ಬಿಂಬಿಸಿಕೊಳ್ಳುವ ಅಗತ್ಯವಿಲ್ಲ’ ಎಂದರು.

 ‘ಪ್ರಗತಿಪರ ಚಿಂತಕರು ಯುದ್ಧೋತ್ಪಾ ದನೆ ಮತ್ತು ಭಯೋತ್ಪಾದನೆಯಂತಹ ಪ್ರವೃತ್ತಿಗಳನ್ನು ಏಕಕಾಲದಲ್ಲಿ ಹತ್ತಿಕ್ಕುವ ಸಂಕಲ್ಪ ಮಾಡಬೇಕು. ಕೋಮುಸೌಹಾರ್ದದ ಧೋರಣೆ ಕುರಿತು ಪ್ರಗತಿಪರ ಚಿಂತಕರ ವಲಯದಲ್ಲಿರುವ ಸೈದ್ಧಾಂತಿಕ ವೈರುಧ್ಯಗಳ ಸಂಕಟವನ್ನು ದಮನಗೊಳಿಸಬೇಕು’ಎಂದು ತಿಳಿಸಿದರು.

 ಮಾನವ ಹಕ್ಕುಗಳ ಹೋರಾಟಗಾರ್ತಿ, ಪತ್ರಕರ್ತೆ ತೀಸ್ತಾ ಸೆಟ್ಲ್‌ವಾಡ್ ಮಾತನಾಡಿ, ‘ಕರ್ನಾಟಕ ಮತ್ತು ಗುಜರಾತ್‌ಗಳಲ್ಲಿ ಪ್ರಭುತ್ವದ ಭಯೋತ್ಪಾದನೆ ಪ್ರಬಲವಾಗಿಯೇ ನಡೆಯುತ್ತಿದೆ. 2009ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸಂಘ ಪರಿವಾರಗಳ ವಿರುದ್ಧ ದಾಖಲಾದ 36,000 ವಿವಿಧ ಪ್ರಕರಣಗಳನ್ನು ಏಕಾಏಕಿ ಖುಲಾಸೆಗೊಳಿಸಿತು. ಪ್ರಭುತ್ವ ಭಯೋತ್ಪಾದನೆಗೆ ಇದಕ್ಕಿಂತ ಉದಾಹರಣೆ ಬೇಕೆ?’ ಎಂದು ಪ್ರಶ್ನಿಸಿದರು.

 ‘ಕಾರ್ಪೋರೇಟ್ ವಲಯ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಭಾರತದ ಮುಂದಿನ ಪ್ರಧಾನಿ ಎಂದು ನಿರ್ಧರಿಸಿದೆ’ಎಂಬ ಮಾಜಿ ಕೇಂದ್ರ ಸಚಿವ ಅರುಣ್ ಶೌರಿಯ ಹೇಳಿಕೆ ಪ್ರಸ್ತಾಪಿಸಿದ ಅವರು, ‘ಒಂದೊಮ್ಮೆ ಮೋದಿ ಪ್ರಧಾನಿಯಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಪೂರ್ಣ ತಿಲಾಂಜಲಿ ಇಡಬೇಕಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರೊ. ರಹಮತ್ ತರೀಕೆರೆ ಮಾತನಾಡಿ, ’ರಾಜ್ಯದಲ್ಲಿ ಉರ್ದು ಅಕಾಡೆಮಿಯನ್ನು ವಕ್ಫ್ ಇಲಾಖೆಗೆ ಸೇರಿಸಬೇಕೆಂಬ ಸರ್ಕಾರದ ಪ್ರಯತ್ನ ಖಂಡನೀಯ. ಉರ್ದು ಭಾಷೆ ಕೇವಲ ಮುಸ್ಲಿಂ ಜನಾಂಗದ ಸ್ವತ್ತಲ್ಲ. ಉರ್ದು ಭಾಷೆ ಮತ್ತು ಮುಸ್ಲಿಂ ಜನಾಂಗವನ್ನು ಸಮೀಕರಿಸುವುದರ ಹಿಂದೆ ವ್ಯವಸ್ಥಿತ ರಾಜಕಾರಣವಿದೆ’ ಎಂದು ದೂರಿದರು.

‘ಮುಸ್ಲಿಂ ಜನಾಂಗದವರು ಕನ್ನಡ, ಕೊಂಕಣಿ, ಬ್ಯಾರಿ ಭಾಷೆಗಳನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಅಂತಹುದರಲ್ಲಿ ಕೇವಲ ಉರ್ದು ಭಾಷೆಯನ್ನು ಮಾತ್ರ ಮುಸ್ಲಿಮರು ನಮ್ಮ ಭಾಷೆಯೆಂದು ಹೇಳಿಕೊಳ್ಳುವ ಅಗತ್ಯವಿಲ್ಲ. ಉರ್ದು ಭಾಷೆಗೂ ಇಸ್ಲಾಂಗೂ  ಯಾವುದೇ ಸಂಬಂಧವಿಲ್ಲ. ಮೂಲಭೂತವಾಗಿ ಉರ್ದು ಭಾಷೆ ಯುದ್ಧಗಳಲ್ಲಿ ಎಲ್ಲಾ ಜನಾಂಗದ ಸೈನಿಕರು ಬಳಸುತ್ತಿದ್ದ ಭಾಷೆ’ ಎಂದು ಸ್ಪಷ್ಟಪಡಿಸಿದರು.

 ’ಪತ್ರಿಕೆಗಳು ’ಅನ್ಯಭಾಷಿಗರು’ ಎಂಬ ಅಭಾಸ ಉಂಟುಮಾಡುವ ಪದವನ್ನು ಬಳಸುತ್ತಿವೆ. ಇದರಿಂದ ಪ್ರತ್ಯೇಕತೆಯ ಭಾವ ಸೃಷ್ಟಿಯಾಗುತ್ತದೆ. ಉರ್ದು ಅಕಾಡೆಮಿಯನ್ನು ಅಲ್ಪಸಂಖ್ಯಾತ ಇಲಾಖೆಗೆ ಸೇರಿಸುವ ಒತ್ತಾಯದ ಹಿಂದೆ ಈ ಪ್ರತ್ಯೇಕತಾ ಮನೋಭಾವವು ಕಾರ್ಯನಿರ್ವಹಿಸುತ್ತಿದೆ. ಇಂತಹ ಧ್ರುವಿಕರಣ ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿ ಹಿಂಸೆಗೆ ಕಾರಣವಾಗುತ್ತವೆ’ ಎಂದು ಎಚ್ಚರಿಸಿದರು,

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ವೇದಿಕೆ ಉಪಾಧ್ಯಕ್ಷ ಕೆ.ಫಣಿರಾಜ್, ಕಾರ್ಯದರ್ಶಿ ಕೆ.ಎಲ್.ಅಶೋಕ್, ಲೇಖಕ ಸುರೇಶ ಭಟ್ ಬಾಕ್ರಬೈಲು, ಪತ್ರಕರ್ತ ಡಾ.ಜಿ.ರಾಮಕೃಷ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.