ADVERTISEMENT

ಜಾತಿ ಪ್ರಸ್ತಾಪ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 18:30 IST
Last Updated 10 ಜುಲೈ 2012, 18:30 IST

ಬೆಂಗಳೂರು: ಜಗದೀಶ ಶೆಟ್ಟರ್ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಆಗುತ್ತಿಲ್ಲ. ಹೋರಾಟದಿಂದ ಬಂದಿರುವ ಅವರ ಸಾಮರ್ಥ್ಯವನ್ನು ಗುರುತಿಸಿ ಅವಕಾಶ ನೀಡಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಸ್ವಾರ್ಥಕ್ಕಾಗಿ ಜಾತಿಯನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದು ಸಂಸದರಾದ ಪ್ರಭಾಕರ ಕೋರೆ, ಸುರೇಶ್ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಬೆಳಿಗ್ಗೆ ಶೆಟ್ಟರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ಇಪ್ಪತ್ತು ವರ್ಷದ ನಂತರ ಉತ್ತರ ಕರ್ನಾಟಕ ಭಾಗದವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿರುವುದು ಹರ್ಷ ಉಂಟುಮಾಡಿದೆ. ನಾವೆಲ್ಲ ಹಬ್ಬದ ಸಂಭ್ರಮದಲ್ಲಿ ಇರುವಾಗ ಕ್ಯಾತೆ ತೆಗೆಯುವುದು ಸರಿಯಲ್ಲ~ ಎಂದರು.

`11 ತಿಂಗಳ ಹಿಂದೆ ಸದಾನಂದಗೌಡರು ಮುಖ್ಯಮಂತ್ರಿಯಾದಾಗ ಲಿಂಗಾಯತ ಸಮುದಾಯದ ಶೇ 80ರಷ್ಟು ಶಾಸಕರು ಅವರನ್ನು ಬೆಂಬಲಿಸಿದ್ದರು. ಆಗ ಜಾತಿಯ ಪ್ರಶ್ನೆ ಬರಲಿಲ್ಲ. ಈಗ ಆ ವಿಚಾರ ಪ್ರಸ್ತಾಪ ಆಗುತ್ತಿರುವುದು ಸರಿಯಲ್ಲ. ಜಾತಿ ಕಾರಣಕ್ಕೆ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿಲ್ಲ~  ಎಂದರು.

 ನಿಷ್ಠಾವಂತ ಕಾರ್ಯಕರ್ತರಾಗಿರುವ ಅವರು ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ಪಕ್ಷದ ಮುಖಂಡ ಎಂಬುದನ್ನು ಗಮನಿಸಿ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಲಿಂಗಾಯತರು ಜಾತಿವಾದಿಗಳಲ್ಲ. ಕೆಳಕ್ಕೆ ಬಿದ್ದವರನ್ನು ಎತ್ತುವ ಕೆಲಸವನ್ನು ಮಠಗಳು ಮಾಡುತ್ತಿವೆ. ದೇವರ ಅನುಗ್ರಹದಿಂದ ಆರು ಕೋಟಿ ಜನರ ಸೇವೆ ಮಾಡುವ ಅವಕಾಶ ಶೆಟ್ಟರ್ ಅವರಿಗೆ ದೊರಕಿದೆ ಎಂದು ತಿಳಿಸಿದರು.

ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳು ಇರುವುದು ನಿಜ. ಅವನ್ನು ನಿವಾರಿಸಿ ಒಳ್ಳೆಯ ಆಡಳಿತ ನೀಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರಾಜ್ಯದಲ್ಲಿ ಬರ ಇದೆ. ಅತ್ತ ಗಮನಹರಿಸದಿದ್ದರೆ ಜನ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.