ಬೆಂಗಳೂರು: ‘ರಾಜ್ಯದ 29 ಜಿಲ್ಲೆಗಳಲ್ಲಿನ ನ್ಯಾಯಾಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಹೇಳಿದರು.
ನಗರದ ಎಸಿಎಂಎಂ ಕೋರ್ಟ್ ಆವರಣದಲ್ಲಿ ಸೋಮವಾರ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನನ್ನ ಅವಧಿಯಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿನ ಮೂಲ ಸೌಕರ್ಯಗಳ ಕೊರತೆಯನ್ನು ಆದ್ಯತೆ ಮೇರೆಗೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಅಂಚೆ ಕಚೇರಿಯಿಲ್ಲದೆ ತೊಂದರೆಯಾಗುತ್ತಿತ್ತು. ಬಹುದಿನಗಳ ಬೇಡಿಕೆಯಾದ ಅಂಚೆ ಕಚೇರಿ ಇಂದು ಉದ್ಘಾಟನೆಯಾಗಿದೆ’ ಎಂದರು.
‘ಅಂಚೆ ಕಚೇರಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ನ್ಯಾಯಾಲಯದಲ್ಲಿ ಇನ್ನಿತರ ಕಾಮಗಾರಿಗಳಾಗಬೇಕು’ ಎಂದು ಹೇಳಿದರು.
ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ಎಂ.ಎಸ್.ರಾಮಾನುಜಂ ಮಾತನಾಡಿ, ‘ಇದು ಅಂತರ್ಜಾಲದ ಕಾಲವಾದ್ದರಿಂದ ಅಂಚೆಸೇವೆಗೆ ಬೇಡಿಕೆ ಕಡಿಮೆಯಾಗಿದೆ. ಆದರೆ, ಸಂವಹನದ ಮುಖ್ಯ ಮಾರ್ಗವಾಗಿ ಇಂದಿಗೂ ಅಂಚೆ ಇಲಾಖೆ ಕೆಲಸ ನಿರ್ವಹಿಸುತ್ತಿದೆ’ ಎಂದರು.
‘ಅಂಚೆ ಕಚೇರಿಯು ಈಗ ಬ್ಯಾಂಕ್ ಮತ್ತು ಜೀವ ವಿಮಾ ಕಂಪೆನಿಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಪ್ರಯತ್ನ ಮಾಡುತ್ತಿದೆ. ಟೆಲಿಗ್ರಾಂಗೆ ಬದಲಾಗಿ ಇ– ಪೋಸ್ಟ್ ಸೇವೆಯನ್ನು ಆರಂಭಿಸಲಾಗಿದೆ’ ಎಂದು ಹೇಳಿದರು.
ನಗರ ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಅನೇಕ ಸಮಸ್ಯೆಗಳಿವೆ. ಆವರಣದಲ್ಲಿರುವ ಗಣಪತಿ ದೇವಸ್ಥಾನವನ್ನು ಸ್ಥಳಾಂತರಿಸಿ, ಪಾರ್ಕಿಂಗ್ ಸಮಸ್ಯೆ ನಿವಾರಿಸಬೇಕು. 1500 ಮಂದಿ ಕುಳಿತುಕೊಳ್ಳುವಂತಹ ಸಭಾಂಗಣ ನಿರ್ಮಾಣವಾಗಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.