ADVERTISEMENT

ಜುಲೈ 16ರಿಂದ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ಬೆಂಗಳೂರು: ಮುಂದಿನ ತಿಂಗಳ 16 ಮತ್ತು 17ರಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಎರಡು ಸಾವಿರ ಜನರಿಗೆ ಉದ್ಯೋಗ ನೀಡುವ ವಿಶ್ವಾಸವಿದೆ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಶನಿವಾರ ಇಲ್ಲಿ ತಿಳಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಈ ಮೇಳವನ್ನು ಆಯೋಜಿಸಲಾಗಿದ್ದು, 8ನೇ ತರಗತಿಯಿಂದ ಹಿಡಿದು ಪಿಎಚ್.ಡಿ ಪಡೆದವರಿಗೂ ಅವಕಾಶವಿದೆ. ಕೌಶಲ ಇರಲಿ, ಇಲ್ಲದೆ ಇರಲಿ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬಹುದು. ಅಗತ್ಯವುಳ್ಳವರಿಗೆ ತರಬೇತಿ ನೀಡಲಾಗುತ್ತದೆ ಎಂದರು.

ಮೇಳದ ಸಿದ್ಧತೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು ಕಾರ್ಯಪಡೆಯ ಸಹ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ ಮತ್ತು ಮಂಗಳೂರಿನ ಆಳ್ವಾಸ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮೇಳ ನಡೆಯಲಿದೆ.

ಮೇಳದಲ್ಲಿ ಒಟ್ಟು ಎಂಟು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಸೇರಿದಂತೆ ಯಾವುದೇ ವಿದ್ಯಾರ್ಹತೆವುಳ್ಳವರು ಭಾಗವಹಿಸಬಹುದು.
 
ಚಿಕ್ಕಬಳ್ಳಾಪುರದ ಆದಿ ಚುಂಚನಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಮೇಳದಲ್ಲಿ 100ಕ್ಕೂ ಅಧಿಕ ಕಂಪೆನಿಗಳು ತಮಗೆ ಅಗತ್ಯವುಳ್ಳ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿವೆ ಎಂದರು. ಮೇಳಕ್ಕೂ ಮೊದಲು ಸಂದರ್ಶನದ ಸಿದ್ಧತೆ ಬಗ್ಗೆ ತಜ್ಞರು ತರಬೇತಿ ನೀಡಲಿದ್ದಾರೆ.

ಇದು 30ನೇ ಉದ್ಯೋಗ ಮೇಳವಾಗಿದ್ದು, ನಾಸ್ಕಾಂ, ಟ್ಯಾಲಿ, ಮೈಂಡ್‌ಟ್ರೀ, ಇನ್‌ಫೋಸಿಸ್, ಸಿಸ್ಕೊ, ಎಚ್‌ಪಿ, ಐಬಿಎಂ, ಐಕಾನ್ ಮೊದಲಾದ ಕಂಪೆನಿಗಳು ಇದರಲ್ಲಿ ಭಾಗವಹಿಸಲಿವೆ ಎಂದು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ಅಧಿಕಾರಿ ಕೇಶವಮೂರ್ತಿ ತಿಳಿಸಿದರು.

12ನೇ ಪಂಚವಾರ್ಷಿಕ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಐಐಟಿ ಆರಂಭಿಸಲು ಕ್ರಮಕೈಗೊಳ್ಳಲಾಗುವುದು. ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರವನ್ನು ಮುದ್ದೇನಹಳ್ಳಿಯಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಇದು ಶುರುವಾಗಲಿದೆ ಎಂದು ಮೊಯಿಲಿ ಹೇಳಿದರು.

ಮೇಳದಲ್ಲಿ ಭಾಗವಹಿಸುವವರು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಬಹುದು.
ವೆಬ್‌ಸೈಟ್ ವಿಳಾಸ: www.udyogamela.com  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-23430491.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.