ADVERTISEMENT

ಜೂಜು, ಗಾಂಜಾ ವ್ಯಾಪಾರ: 24 ಕೈದಿಗಳು ಬೇರೆ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೂಜು ದಂಧೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ 24 ಕೈದಿಗಳನ್ನು ಅಧಿಕಾರಿಗಳು ಶನಿವಾರ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಿದ್ದಾರೆ.

`ಒಟ್ಟು 20 ಸಜಾ ಕೈದಿಗಳು ಮತ್ತು ನಾಲ್ಕು ಮಂದಿ ವಿಚಾರಣಾಧೀನ ಕೈದಿಗಳನ್ನು ಗುಲ್ಬರ್ಗ, ಬಳ್ಳಾರಿ, ವಿಜಾಪುರ, ಧಾರವಾಡ ಹಾಗೂ ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ~ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಎಚ್. ಲಕ್ಷ್ಮಿನಾರಾಯಣ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಸಜಾ ಕೈದಿಗಳಾದ ಲೋಕೇಶ್, ಪ್ರೀತಮ್, ಆಲ್ವಿನ್, ಮಟನ್ ಬಾಬು, ಅಜ್ಗರ್, ಗೋವಿಂದ, ಮಾಲೂರು ಕೃಷ್ಣ, ಗೋವಿಂದರಾಜು, ಮಂಜುನಾಥ್, ಅಲ್ತಾಫ್, ಮಲ್ಲಿಕಾರ್ಜುನ, ಸುಬ್ರಮಣಿ, ಲಾರೆನ್ಸ್, ಸಾಧು ಪೂಜಾರಿ ಮತ್ತು ವಿಚಾರಣಾಧೀನ ಕೈದಿಗಳಾದ ಕುಣಿಗಲ್ ಗಿರೀಶ್, ಆತನ ಸಹಚರರಾದ ಮಹೇಶ್, ಕೆ.ಬಿ.ಗಿರೀಶ್, ವಾಸು ಎಂಬಾತನನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕಾರಾಗೃಹ ಅಧಿಕಾರಿಗಳು ಹೇಳಿದ್ದಾರೆ.

ಸಜಾ ಕೈದಿಗಳು ಜೈಲಿನಲ್ಲಿ ಗಾಂಜಾ ವ್ಯಾಪಾರ ಮಾಡುತ್ತಿದ್ದರು ಮತ್ತು ಇತರೆ ಕೈದಿಗಳಿಗೆ ಮೊಬೈಲ್‌ಫೋನ್‌ಗಳನ್ನು ತರಿಸಿಕೊಡುತ್ತಿದ್ದರು. ಅಲ್ಲದೇ ದಿನನಿತ್ಯದ ಕೆಲಸಕ್ಕೆ ಹಾಜರಾಗದೆ ಜೈಲಿನ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು.

ವಿಚಾರಣಾಧೀನ ಕೈದಿಗಳಾದ ಕುಣಿಗಲ್ ಗಿರೀಶ್ ಮತ್ತು ಸಹಚರರು ಜೈಲಿನಲ್ಲಿ ಜೂಜು ದಂಧೆ ನಡೆಸುತ್ತಿದ್ದರು. ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದ ಕೈದಿಗಳು ಗಿರೀಶ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.