ಯಲಹಂಕ: ಗ್ರಾಮೀಣ ಭಾಗದ ರೈತರ ಆರ್ಥಿಕಾಭಿವೃದ್ಧಿಗೆ ಪೂರಕವಾಗಿ ಹಾಗೂ ಪರಿಸರವನ್ನು ಉತ್ತಮವಾಗಿಸುವ ನಿಟ್ಟಿನಲ್ಲಿ ಜೈವಿಕ ಇಂಧನ ಉತ್ಪಾದನೆ ಪರಿಣಾಮಕಾರಿಯಾದ ತಂತ್ರಜ್ಞಾನವಾಗಿದ್ದು, ರೈತರು ಇದನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಮನವಿ ಮಾಡಿದರು.
ಕೃಷಿ ವಿ.ವಿ ಆವರಣದಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈವಿಕ ಇಂಧನದ ಅಭಿವೃದ್ಧಿಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ 125 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದು, ಜೈವಿಕ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
‘ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ವಿಸ್ತರಣೆಗೆ ಹೆಚ್ಚು ಆದ್ಯತೆ ನೀಡಿದ್ದು, ಸ್ಥಳೀಯವಾಗಿ ಜೈವಿಕ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಶ್ರಮಿಸುತ್ತಿದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ, ದೊಡ್ಡ ಪ್ರಮಾಣದಲ್ಲಿ ಹೊಂಗೆ, ಬೇವು, ಹಿಪ್ಪೆ ಮತ್ತಿತರ ಜೈವಿಕ ಇಂಧನ ಮೂಲದ ಸಸ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ವಿವರಿಸಿದರು.
‘2005ರಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಆರಂಭಿಸಲಾಗಿತ್ತು. ಅದರ ಯಶಸ್ಸಿನ ತರುವಾಯ ಹಾಸನ ಜಿಲ್ಲೆಯಲ್ಲಿ ಇದೇ ಮಾದರಿಯನ್ನು ಅಳವಡಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿ ಜೈವಿಕ ಇಂಧನ ಘಟಕ ಆರಂಭಿಸಿ, ಪ್ರತಿ ವರ್ಷ 5 ಲಕ್ಷ ಜೈವಿಕ ಇಂಧನ ಸಸಿಗಳನ್ನು ರೈತರಿಗೆ ವಿತರಿಸಿ ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.
ಹಾಸನ ಜೈವಿಕ ಇಂಧನ ಉದ್ಯಾನದ ಯೋಜನಾ ಸಂಯೋಜಕ ಪ್ರೊ. ಬಾಲಕೃಷ್ಣೇಗೌಡ ಮಾತನಾಡಿ, ‘ಜೈವಿಕ ಇಂಧನ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತಿವರ್ಷ ಜೈವಿಕ ಇಂಧನ ಮೂಲದ 10 ಲಕ್ಷ ಟನ್ ಬೀಜಗಳನ್ನು ಉತ್ಪಾದನೆ ಮಾಡಲಾಗುತ್ತಿದೆ’ ಎಂದರು.‘ವಿಶ್ವವಿದ್ಯಾಲಯದ ವತಿಯಿಂದ ಜೈವಿಕ ಇಂಧನ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಗ್ರಾಮ ಮತ್ತು ಗೃಹ ಮಟ್ಟದಲ್ಲೇ ಕೈಚಾಲಿತ ಮತ್ತು ಯಾತ್ರಿಕ ಎಣ್ಣೆ ತೆಗೆಯುವ ಸರಳ ಯಂತ್ರಗಳನ್ನು ಅಭಿವೃದ್ಧಿಪಡಿಸಿ, ರೈತರಿಗೆ ನೀಡಲಾಗಿದೆ. ಇದರಿಂದ ಹೆಚ್ಚಿನ ಉದ್ಯೋಗಗಳು ಸೃಷ್ಠಿಯಾಗುತ್ತಿವೆ’ ಎಂದು ತಿಳಿಸಿದರು.ವಿ.ವಿ ಜೈವಿಕ ಇಂಧನ ಯೋಜನೆ ಪ್ರಧಾನ ಸಂಶೋಧಕ ಪ್ರೊ.ಕೆ.ಟಿ.ಪ್ರಸನ್ನ, ಧಾರವಾಡ ಕೃಷಿ ವಿ.ವಿ ಜೈವಿಕ ಇಂಧನ ಯೋಜನೆ ಸಂಯೋಜಕ ಪ್ರೊ.ಪಾಟೀಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.