ADVERTISEMENT

ಡಾವಿಂಚಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 20:00 IST
Last Updated 17 ಏಪ್ರಿಲ್ 2013, 20:00 IST

ಬೆಂಗಳೂರು: ಕ್ಯಾನ್ವಾಸ್ ಮೇಲೆ ಕಲೆಯ ಅನಾವರಣವಾಗಿತ್ತು. ಹಿರಿ ಕಿರಿಯ ಕಲಾವಿದರು ಚಿತ್ರ ರಚಿಸುವ ಮೂಲಕ ಲಿಯನಾರ್ಡೊ ಡಾವಿಂಚಿಗೆ ಗೌರವ ಸಲ್ಲಿಸಿದರು.

ಅಲ್ಲಿ ಕಲಾವಿದರು ಮಗುವಾಗಿದ್ದರು. ಆಳೆತ್ತರದ ಕ್ಯಾನ್ವಾಸ್ ಮೇಲೆ ತಮ್ಮ ಮನಸ್ಸಿಗೆ ಬಂದಂತೆ ಚಿತ್ರಗಳನ್ನು ರಚಿಸಿದರು.  ಕ್ಯಾನ್ವಾಸ್ ಮೇಲೆ ಬಣ್ಣದೋಕುಳಿ  ಎರಚಿ ತಮ್ಮ ಮನಸ್ಸಿನ ಚಿತ್ರ ಕಲಾವಿದನನ್ನು ಕ್ವಾನ್ವಾಸ್ ಮೇಲೆ ಇಳಿಸುವ ಪ್ರಯತ್ನ ಮಾಡಿದರು. ಕರ್ನಾಟಕ ಲಲಿತಕಲಾ ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದ ಶಿಲ್ಪವನದಲ್ಲಿ ಆಯೋಜಿಸಿದ್ದ `ವಿಶ್ವ ಕಲಾವಿದರ ದಿನಾಚರಣೆ' ಸಂಭ್ರಮದಲ್ಲಿ ಕಲಾವಿದರ ಕಲರವ ಕಂಡುಬಂದಿದ್ದು ಹೀಗೆ..

ನಾಡಿನ ಅನೇಕ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಒಂದೇ ಕ್ಯಾನ್ವಾಸ್ ಮೇಲೆ ಬಣ್ಣದಿಂದ ಚಿತ್ರಗಳನ್ನು ರಚಿಸಿ `ವಿಶ್ವ ಕಲಾವಿದರ ದಿನಾಚರಣೆ' ಯನ್ನು ಸಂಭ್ರಮದಿಂದ ಆಚರಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಸೆಟ್ಟಿ ಮಾತನಾಡಿ, `ಎಲ್ಲ ವರ್ಗದವರಿಗೂ ತಮ್ಮ ದಿನಗಳೆಂದು ಆಚರಿಸಲು ವರ್ಷದಲ್ಲಿ ಒಂದೊಂದು ದಿನಗಳಿವೆ. ಆದರೆ, ಚಿತ್ರ ಕಲಾವಿದರಿಗೆ ಅವರದೇ ದಿನವೆಂದು ಆಚರಣೆ ಮಾಡುವ ಯಾವುದೇ ದಿನವಿರಲಿಲ್ಲ ಎಂಬ ಕೊರಗು ಇತ್ತು' ಎಂದರು.

`ಈ ಮೊದಲು ನಾಡಿನ ಹಿರಿಯ ಕಲಾವಿದರ ಜನ್ಮದಿನವನ್ನೇ ಚಿತ್ರ ಕಲಾವಿದರ ದಿನವಾಗಿ ಆಚರಿಸಲು ಚರ್ಚೆ ನಡೆದಿತ್ತು. ಆದರೆ, ಕಾಕತಾಳೀಯವೆಂಬಂತೆ ಯುನೆಸ್ಕೋ ಸಂಸ್ಥೆಯು ಲಿಯನಾರ್ಡೊ ಡಾ ವಿಂಚಿಯ 306 ನೇ ಜನ್ಮದಿನವನ್ನು ವಿಶ್ವ ಕಲಾವಿದರ ದಿನವಾಗಿ ಆಚರಿಸುವಂತೆ ಘೋಷಿಸಿದೆ. ಇದು ಕಲಾವಿದರೆಲ್ಲ ಸಂತಸ ಪಡುವ ವಿಷಯವಾಗಿದೆ' ಎಂದರು.

ಲಿಯನಾರ್ಡೊ ಡಾ ವಿಂಚಿಯ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಿತು.ಕಲಾವಿದರಾದ ಪ.ಸ.ಕುಮಾರ್, ಎಂ.ಬಿ.ಪಾಟೀಲ್, ಬಿ.ಕೆ.ಎಸ್.ವರ್ಮಾ, ಚಂದ್ರಶೇಖರ್, ಜಾನ್ ದೇವರಾಜ್ ಮತ್ತಿತರ ಕಲಾವಿದರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.