ADVERTISEMENT

‘ತಂದೆಗೆ ಸಿಕ್ಕ ಗೌರವ ಜನಸೇವೆಯತ್ತ ಸೆಳೆಯಿತು’

ಯುಪಿಎಸ್‌ಸಿ ಸಾಧಕರಿಗೆ ‘ಡಾ.ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್‌ ಸರ್ವೀಸಸ್‌’ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:36 IST
Last Updated 6 ಮೇ 2018, 19:36 IST
ರಾಘವೇಂದ್ರ ರಾಜಕುಮಾರ್ ಹಾಗೂ ಚಿತ್ರ ನಟ ಪುನೀತ್‌ ರಾಜಕುಮಾರ್‌ ಜೊತೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಡಾ.ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್‌ ಸರ್ವೀಸಸ್‌ ಸಂಸ್ಥೆ ವಿದ್ಯಾರ್ಥಿಗಳು -ಪ್ರಜಾವಾಣಿ ಚಿತ್ರ
ರಾಘವೇಂದ್ರ ರಾಜಕುಮಾರ್ ಹಾಗೂ ಚಿತ್ರ ನಟ ಪುನೀತ್‌ ರಾಜಕುಮಾರ್‌ ಜೊತೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಡಾ.ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್‌ ಸರ್ವೀಸಸ್‌ ಸಂಸ್ಥೆ ವಿದ್ಯಾರ್ಥಿಗಳು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಯಸ್ಕರ ಶಿಕ್ಷಣಾಧಿಕಾರಿಯಾಗಿದ್ದ ನನ್ನ ತಂದೆಗೆ ಜನರು ಅಪಾರ ಪ್ರೀತಿ ತೋರಿಸಿದ್ದರು. ಅವರಿಗೆ ಸಿಕ್ಕ ಗೌರವ ಹಾಗೂ ನಿವೃತ್ತಿಯ ದಿನ ಜನ ಅವರನ್ನು ಬೀಳ್ಕೊಟ್ಟ ರೀತಿ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ನಾನೂ ಅಧಿಕಾರಿ ಆಗಬೇಕು ಎಂದು ಅಂದೇ ತೀರ್ಮಾನಿಸಿದೆ’

-ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2017ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆದ ಬೀದರ್‌ ಜಿಲ್ಲೆಯ ಕಾಶೆಂಪುರದ ರಾಹುಲ್‌ ಶಿಂಧೆ ಅವರ ಮನದಾಳದ ಮಾತುಗಳಿವು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ‘ಡಾ.ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್‌ ಸರ್ವೀಸಸ್‌’ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.

ADVERTISEMENT

‘ನಾನು ಐಐಟಿ ಪದವೀಧರ. ಕಾರ್ಪೊರೇಟ್‌ ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗವೂ ಸಿಕ್ಕಿತ್ತು. ಒಬ್ಬ ಅಧಿಕಾರಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಜನ ಅವರನ್ನು ಎಷ್ಟು ಆದರಿಸುತ್ತಾರೆ. ಅದರಿಂದ ಎಷ್ಟು ತೃಪ್ತಿ ಸಿಗುತ್ತದೆ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ನಾನು ಆ ಉದ್ಯೋಗವನ್ನು ತ್ಯಜಿಸಿ ನಾಗರಿಕ ಸೇವಾ ಪರೀಕ್ಷೆ ಬರೆದೆ’ ಎಂದರು.

ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ್‌ ಹೊಸೂರ್, ‘ಅಧಿಕಾರಿಯಾದ ಬಳಿಕ ನಾನೇ ಮೇಲು, ನಾನೇ ಬಲಿಷ್ಠ ಎಂಬ ಭ್ರಮೆ ಹುಟ್ಟುತ್ತದೆ. ಅಹಂಕಾರ ತಲೆಗೇರಲು ಬಿಟ್ಟ ದಿನವೇ ಪತನ ಆರಂಭವಾಗುತ್ತದೆ’ ಎಂದರು.

ರಾಘವೇಂದ್ರ ರಾಜ್‌ಕುಮಾರ್‌, ‘ತಂದೆ ರಾಜ್‌ಕುಮಾರ್‌ ಅವರಿಗೆ ಡಾಕ್ಟರೇಟ್‌ ಪದವಿ ನೀಡಿದಾಗ, ಎಮ್ಮೆ ಮೇಯಿಸುತ್ತಿದ್ದ ನನಗೇಕೆ ಈ ಗೌರವ ಎಂದು ಮುಜುಗರಪಟ್ಟಿದ್ದರು. ಅವರು ಇರುತ್ತಿದ್ದರೆ, ಈ ಅಕಾಡೆಮಿಯಿಂದ ತರಬೇತಿ ಪಡೆದ 16 ಮಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದನ್ನು ಕಂಡು ಖುಷಿಪಡುತ್ತಿದ್ದರು. ಮರಕ್ಕೆ ಹೆಸರು ಬರುವುದು ಅದು ನೀಡುವ ಹಣ್ಣುಗಳಿಂದ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸೇವೆ ಮೂಲಕ ಸಂಸ್ಥೆಗೆ ಹೆಸರು ತರಬೇಕು’ ಎಂದರು.

ಅಕಾಡೆಮಿಯಿಂದ ತರಬೇತಿ ಪಡೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ರಾಹುಲ್‌ ಶಿಂಧೆ, ಎಂ.ಶ್ವೇತಾ, ಶುಭಮಂಗಳಾ, ಸಿ.ವಿಂಧ್ಯಾ, ಗೋಪಾಲಕೃಷ್ಣ, ವಿನೋದ ಪಾಟೀಲ, ಸುದರ್ಶನ ಭಟ್‌, ಎನ್‌.ವೈ.ವೃಷಾಂಕ್‌ , ಸೂರ್ಯಸಾಯಿ ಪ್ರವೀಣ್‌ ಚಂದ್‌, ಅಭಿಲಾಷ್‌, ನಿಖಿಲ್‌, ಎಸ್‌.ಪ್ರೀತಂ, ಬಿ.ಸಿ.ಹರೀಶ್‌, ಆಶೀಷ್‌ ಕುಮಾರ್‌ ಸಾಹ, ಸ್ಪರ್ಶಾ ನೀಲಂಗಿ, ಹರ್ಷವರ್ಧನ, ವೆಂಕಟೇಶ ನಾಯಕ್‌ ಅವರನ್ನು ಸನ್ಮಾನಿಸಲಾಯಿತು.

‘ನಿರ್ಭಿಡೆ, ನಿಯತ್ತಿನಿಂದ ಕಾರ್ಯನಿರ್ವಹಿಸಿ’
‘ದಕ್ಷ ಆಡಳಿತಗಾರರಾಗಬೇಕಾದರೆ ನಿಯತ್ತಿನಿಂದ ಕಾರ್ಯನಿರ್ವಹಿಸಿ, ನಿರ್ಭಿಡೆಯಿಂದ ವರ್ತಿಸಿ ಹಾಗೂ ಸಮಯ ಪರಿಪಾಲನೆಗೆ ಮಹತ್ವ ನೀಡಿ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಶ್ರೀನಿವಾಸನ್‌ ಅವರು ಭಾವಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

‘ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದಾಗ ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಮೂರು ಆಯಾಮಗಳಲ್ಲಿ ಮೌಲ್ಯಮಾಪನಕ್ಕೆ ಒಳಪಡಿಸುವ ಉತ್ತಮ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಅಧಿಕಾರಿಗಳು ಈ ಹಿಂದಿನಂತೆ ಕೇವಲ ಮೇಲಧಿಕಾರಿಗೆ ನಿಷ್ಠೆಯಿಂದ ನಡೆದುಕೊಂಡರೆ ಸಾಲದು. ಈಗ ಮೇಲಧಿಕಾರಿ ಜೊತೆಗೆ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಮೌಲ್ಯಮಾಪನ ನಡೆಯುತ್ತದೆ. ಯಾವುದೇ ಸವಾಲುಗಳಿಂದಲೂ ವಿಮುಖವಾಗುವಂತಿಲ್ಲ’ ಎಂದರು.

*
ನಾನು ಹುಟ್ಟಿ ಬೆಳೆದದ್ದು ಬನಹಟ್ಟಿಯಲ್ಲಿ. ಜನರ ಕಷ್ಟಗಳನ್ನು ಹತ್ತಿರದಿಂದ ಬಲ್ಲವ ನಾನು. ಗ್ರಾಮೀಣಾಭಿವೃದ್ಧಿ ನನ್ನ ಕನಸು.
-ಅಭಿಲಾಷ್‌, 531ನೇ ರ‍್ಯಾಂಕ್‌

*
ಪಾರದರ್ಶಕವಾಗಿ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತೇನೆ. ಜನರ ಜತೆ ಬೆರೆತು ಕಾರ್ಯನಿರ್ವಹಿಸುತ್ತೇನೆ. 
-ಸಿ.ವಿಂಧ್ಯಾ, 160ನೇ ರ‍್ಯಾಂಕ್‌

*
ನಾನು ನಟಿಸಿದ ‘ಪೃಥ್ವಿ’ ಸಿನಿಮಾ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು ಅನೇಕರಿಗೆ ಪ್ರೇರಣೆ ಆಗಿದೆ ಎನ್ನುತ್ತೀದ್ದೀರಿ. ನಾನು ನಟ ಮಾತ್ರ. ನೀವೇ ನಿಜವಾದ ಹೀರೋಗಳು.
–ಪುನೀತ್‌ ರಾಜ್‌ಕುಮಾರ್‌, ಸಿನಿಮಾ ನಟ

*
ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳ ಮೂಲಕವೂ ಮಹತ್ತರ ಮಾರ್ಪಾಡು ತರಲು ಸಾಧ್ಯ. ಬಡವರ ಬದುಕಿನಲ್ಲಿ ಬದಲಾವಣೆ ತರಬೇಕೆಂಬುದು ನನ್ನ ಹಂಬಲ.
-ರಾಹುಲ್‌ ಶಿಂಧೆ, 95ನೇ ರ‍್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.