ಬೆಂಗಳೂರು: `ತಂದೆಯಿಂದ ಹಲ್ಲೆಗೊಳಗಾದ ಮಗುವಿನ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದ್ದು, ಉಸಿರಾಟದ ತೊಂದರೆಯಿಂದ ಮಗು ಸಾವನ್ನಪ್ಪಿದೆ~ ಎಂದು ವೈದ್ಯರು ತಿಳಿಸಿದರು.
`ಮಗು ನೇಹಾ ಆಫ್ರಿನ್‌ಳ ಚಿಕಿತ್ಸೆ ಸಂಬಂಧ ನಿಮ್ಹಾನ್ಸ್ ಆಸ್ಪತ್ರೆಯ ನರರೋಗ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಮಂಗಳವಾರ ಚಿಕಿತ್ಸೆ ನೀಡಿದೆವು. ಆದರೆ, ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಮಗು ಸಾವನ್ನಪ್ಪಿತು~ ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸೋಮೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.
`ಮೆದುಳಿಗೆ ತೀವ್ರ ಪೆಟ್ಟು ಬಿದ್ದಾಗ ಮೂರು ವಾರಗಳ ಕಾಲ ಏನನ್ನೂ ಹೇಳಲು ಆಗುವುದಿಲ್ಲ. ಎಲ್ಲಾ ರೀತಿಯ ಅಗತ್ಯ ತುರ್ತು ಚಿಕಿತ್ಸೆಯನ್ನು ನೀಡಿದ್ದೇವೆ. ರಾತ್ರಿ ಮಗುವಿನ ರಕ್ತದ ಚಲನೆ ಹಾಗೂ ನಾಡಿ ಮಿಡಿತ ಸಹಜ ಸ್ಥಿತಿಯಲ್ಲಿತ್ತು. ಆದರೆ ಮಗುವಿಗೆ ಪದೇ ಪದೇ ಮೂರ್ಛೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರಿಂದ ಮಗುವಿನ ಸ್ಥಿತಿ ಮತ್ತೆ ಗಂಭೀರವಾಗುತ್ತಿತ್ತು. ಬೆಳಿಗ್ಗೆ 8.45ಕ್ಕೆ ಮಗುವಿನ ಆರೋಗ್ಯ ಸ್ಥಿತಿಯನ್ನು ಪರೀಕ್ಷೆ ಮಾಡಿದಾಗ ಉಸಿರಾಟದಲ್ಲಿ ವ್ಯತ್ಯಾಸವಾಗಿತ್ತು ಎಂದು ಅವರು ತಿಳಿಸಿದರು.
`ಶಸ್ತ್ರಚಿಕಿತ್ಸೆಗೆ ಬದಲಾಗಿ ಔಷಧ ನೀಡುವುದೇ ಉತ್ತಮ ಎಂಬ ತಜ್ಞರ ಸಲಹೆಯಂತೆ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಮಗು ಸ್ಪಂದಿಸಲಿಲ್ಲ. ಮಗುವಿನ ದೇಹದ ಮೇಲೆ ಸುಟ್ಟಿರುವ ಹಾಗೂ ಕಚ್ಚಿರುವ ಗುರುತುಗಳಿದ್ದು ಆ ನೋವುಗಳು ಮಗುವಿನ ಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ~ ಎಂದು ಹೇಳಿದರು.
`ಏ.5 ರಂದು ಮಗುವಿನ ಮೇಲೆ ಹಲ್ಲೆಯಾಗಿದೆ. ಅದೇ ದಿನ ಪೋಷಕರು ಮಗುವನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ನಂತರ ನಿಮ್ಹಾನ್ಸ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸಿ ಮಗುವಿನ ಮೆದುಳಿಗೆ ಪೆಟ್ಟು ಬಿದ್ದಿದೆ ಎಂದು ಗೊತ್ತಾದ ನಂತರ ತಜ್ಞರ ಸಲಹೆಯಂತೆ ಭಾನುವಾರ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನಗಳ ಕಾಲ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ನಮ್ಮ ಪ್ರಯತ್ನಗಳೆಲ್ಲಾ ವಿಫಲವಾಗಿದ್ದು ಬೇಸರವಾಗಿದೆ~ ಎಂದು ಅವರು ತಿಳಿಸಿದರು.
`ನನ್ನ ಹತ್ತು ವರ್ಷದ ವೃತ್ತಿ ಜೀವನದಲ್ಲಿ ಇಂತಹ ಪ್ರಕರಣವನ್ನು ಕಂಡಿರಲಿಲ್ಲ. ಮಗುವಿನ ಮೆದುಳಿನ ಪದರದಲ್ಲಿ ರಕ್ತ ಸ್ರಾವ ಉಂಟಾಗಿದ್ದು ಮೂರು ದಿನಗಳಲ್ಲಿ ಅದನ್ನು ತಡೆಯಲು ನಮ್ಮಿಂದ ಸಾಧ್ಯವಾಗಲಿಲ್ಲ. ಕೃತಕ ಉಸಿರಾಟ ಹಾಗೂ ಜೀವರಕ್ಷಕ ವ್ಯವಸ್ಥೆಯಲ್ಲಿ ಮಗುವನ್ನು ಇಡಲಾಗಿತ್ತು. ಆದರೆ, ಆಮ್ಲಜನಕ ಮೆದುಳಿಗೆ ಹೋಗುತ್ತಿರಲಿಲ್ಲ. ಇದರಿಂದ ಮಗುವಿನ ಶ್ವಾಸಕೋಶಕ್ಕೂ ತೊಂದರೆಯಾಗಿತ್ತು~ ಎಂದು ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವೈದ್ಯೆ ಪ್ರೇಮಲತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.