ADVERTISEMENT

ತಾಪಮಾನ ಹೆಚ್ಚಳ: ಚುನಾವಣೆಗೂ ಬಿಸಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ತಾಪಮಾನ ಹೆಚ್ಚಳ: ಚುನಾವಣೆಗೂ ಬಿಸಿ
ತಾಪಮಾನ ಹೆಚ್ಚಳ: ಚುನಾವಣೆಗೂ ಬಿಸಿ   

ಬೆಂಗಳೂರು: ರಾಜ್ಯದಲ್ಲಿ ಉಷ್ಣಾಂಶ ಹಾಗೂ ವಿಧಾನಸಭೆ ಚುನಾವಣೆಯ ಕಾವು ಒಟ್ಟೊಟ್ಟಿಗೆ ಏರುತ್ತಿವೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇದರಿಂದ ಚುನಾವಣಾ ಚಟುವಟಿಕೆಗೂ ಬಿಸಿ ತಟ್ಟಲಿದೆ.

ತಾಪಮಾನ ಹೆಚ್ಚಳ ಕುರಿತ ಮಾಹಿತಿ ಬಯಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ (ಕೆಎಸ್‌ಎನ್‌ಡಿಎಂಸಿ) ನಿತ್ಯವೂ ಅನೇಕ ದೂರವಾಣಿ ಕರೆಗಳು ಬರುತ್ತಿವೆ. ರೈತರು ಮಾತ್ರ ಅಲ್ಲ, ನಾಗರಿಕರು ಹಾಗೂ ಚುನಾವಣಾ ಪ್ರಚಾರ ಸಭೆಗಳನ್ನು ಏರ್ಪಡಿಸುವ ಪಕ್ಷಗಳ ಮುಖಂಡರೂ ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರೆ ಎನ್ನುತ್ತಾರೆ ಕೇಂದ್ರದ ಅಧಿಕಾರಿಗಳು.

ಅವರಷ್ಟೇ ಅಲ್ಲ: ಚುನಾವಣಾ ಆಯೋಗ, ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗಳೂ ಹವಾಮಾನದ ಮಾಹಿತಿ ಹಾಗೂ ಬೇಸಿಗೆ ಅವಧಿಯ ಮುನ್ಸೂಚನೆಯ ವಿವರಗಳನ್ನು ಪಡೆದಿವೆ. ರಾಜ್ಯದಲ್ಲಿ ಚುನಾವಣೆಯ ದಿನಾಂಕ ನಿಗದಿಪಡಿಸಲು ಅವರು ಈ ಮಾಹಿತಿ ಪಡೆದಿದ್ದಾರೆ ಎಂದರು.

ADVERTISEMENT

ಬೆಂಗಳೂರಿನಲ್ಲಿ ಸೋಮವಾರ ಗರಿಷ್ಠ 34.1ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಕಲಬುರ್ಗಿಯಲ್ಲಿ ಗರಿಷ್ಠ 40.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದು ರಾಜ್ಯದಲ್ಲಿ ಸೋಮವಾರ ದಾಖಲಾದ ಗರಿಷ್ಠ ಉಷ್ಣಾಂಶವೂ ಹೌದು. ಮೈಸೂರಿನಲ್ಲಿ ಕನಿಷ್ಠ 16.3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು.

ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಪ್ರಭಾರ ನಿರ್ದೇಶಕ ಎಲ್‌.ರಮೇಶ್‌ ಬಾಬು, ‘ರಾಜ್ಯದಲ್ಲಿ ಒಣಹವೆ ಇದೆ. ಗಾಳಿಯ ಆರ್ಭಟ ಕಡಿಮೆ ಇದೆ. ಮುಂಬರುವ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಹೆಚ್ಚಲಿದೆ ಎಂಬುದರ ಮುನ್ಸೂಚನೆ ಇದು. ವಾತಾವರಣದಲ್ಲಿ ಒಣಹವೆ ಇರುವುದರಿಂದ ಜನರಿಗೆ ತಾಪಮಾನದ ತೀವ್ರತೆಯ ಅನುಭವ ಆಗುತ್ತಿದೆ’ ಎಂದು ವಿವರಿಸಿದರು.

ಚುನಾವಣೆಯ ದಿನಾಂಕ ಘೋಷಣೆ ವಿಳಂಬವಾದಷ್ಟೂ ರಾಜ್ಯದ ಜನರು ಕಠಿಣ ಸನ್ನಿವೇಶ ಎದುರಿಸಬೇಕಾಗುತ್ತದೆ. ಅದರಲ್ಲೂ ಉತ್ತರ ಒಳನಾಡಿನಲ್ಲಿ ಜನರು ಹೆಚ್ಚು ಸಮಸ್ಯೆ ಅನುಭವಿಸುತ್ತಾರೆ. ಅಲ್ಲಿ ತಾಪಮಾನವು 44– 45 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳ ಕಂಡರೂ ಅಚ್ಚರಿ ಇಲ್ಲ ಎಂದು ಅವರು ತಿಳಿಸಿದರು.

ಕೆಎಸ್‌ಎನ್‌ಡಿಎಂಸಿಯ ನಿರ್ದೇಶಕ ಡಾ.ಜಿಎಸ್‌.ಶ್ರೀನಿವಾಸ್‌ ರೆಡ್ಡಿ, ‘ಉಷ್ಣಾಂಶವು ಈಗಾಗಲೇ ವಾಡಿಕೆಗಿಂತ 1.5 ಡಿಗ್ರಿಯಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿದೆ. ಆದರೆ, ಇದು ಸಾರ್ವಕಾಲಿಕ ಗರಿಷ್ಠ ತಾಪಮಾನವಲ್ಲ. ಸದ್ಯಕ್ಕಂತೂ ಉಷ್ಣಾಂಶ ತಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ’ ಎಂದರು.

ಹವಾಮಾನ ಇಲಾಖೆ ದಾಖಲೆಗಳ ಪ್ರಕಾರ, ಬೆಂಗಳೂರಿನಲ್ಲಿ ಮಾರ್ಚ್‌ ತಿಂಗಳಲ್ಲಿ ಗರಿಷ್ಠ ಉಷ್ಣಾಂಶವು 37.3 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿತ್ತು. 1996ರ ಮಾರ್ಚ್‌ 29ರಂದು ಇಷ್ಟು ಉಷ್ಣಾಂಶ ದಾಖಲಾಗಿತ್ತು.

ಕರಾವಳಿ, ಮಲೆನಾಡಿನಲ್ಲಿ ಮಳೆ

ಕರ್ನಾಟಕ ಹಾಗೂ ಕೇರಳದ ತೀರ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಇನ್ನೆರಡು ದಿನಗಳಲ್ಲಿ ತುಂತುರು ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.