ADVERTISEMENT

ತೆಂಗಿನ ಮರದ ತೊಂದರೆ: ಪರಿಹಾರಕ್ಕೆಆದೇಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬೆಂಗಳೂರು: ತೆಂಗಿನ ಮರಗಳು ಇರುವ ಜಾಗದಲ್ಲಿ ಕಾರು ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿ, ತೆಂಗಿನ ಕಾಯಿ ವಾಹನಗಳ ಮೇಲೆ ಬೀಳದಂತೆ ಎಚ್ಚರಿಕೆ ಕ್ರಮ ತೆಗೆದುಕೊಳ್ಳದ ಅಪಾರ್ಟ್‌ಮೆಂಟ್ ಮಾಲೀಕರ ಸಂಘ ಒಂದಕ್ಕೆ 30ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ವರ್ತೂರು ರಸ್ತೆಯ ಬಳಿ ಇರುವ `ಪೂರ್ವ ಅಪಾರ್ಟ್‌ಮೆಂಟ್ ಮಾಲೀಕರ ಸಂಘ~ದ ವಿರುದ್ಧ ಹಾಜೀರಾ ಷರೀಫ್ ಅವರು ಸಲ್ಲಿಸಿದ್ದ ದೂರು ಇದಾಗಿದೆ. ತೆಂಗಿನ ಕಾಯಿಗಳು ಕಾರಿನ ಮೇಲೆ ಬಿದ್ದು ಅವರು ತೊಂದರೆ ಪಡುವ ಹಾಗಾದ  ಹಿನ್ನೆಲೆಯಲ್ಲಿ ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

`ತೆಂಗಿನ ಕಾಯಿಗಳು ಪದೇ ಪದೇ ಬೀಳುವ ಕಾರಣದಿಂದ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಂಘಕ್ಕೆ ಕೋರಿಕೊಂಡರೂ ಪ್ರಯೋಜನ ಆಗಲಿಲ್ಲ. ಮೂರು ತಿಂಗಳಿಗೊಮ್ಮೆ 23 ಸಾವಿರ ರೂ. ಗಳ ನಿರ್ವಹಣಾ ವೆಚ್ಚವನ್ನೂ ನಾವು ಸಂಘಕ್ಕೆ ಭರಿಸುತ್ತಿದ್ದೇವೆ. ಆದರೂ ಸಂಘ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಕಾರಿನ ದುರಸ್ತಿಗೆ ಈಗಾಗಲೇ 60-70ಸಾವಿರ ರೂಪಾಯಿ ಖರ್ಚಾಗಿದೆ~ ಎಂದು ಅರ್ಜಿದಾರರು ದೂರಿದ್ದರು.
ಈ ಹಿನ್ನೆಲೆಯಲ್ಲಿ, ತೆಂಗಿನ ಕಾಯಿ ಬೀಳದಂತೆ ಕೂಡಲೇ ಕಬ್ಬಿಣದ ಬೇಲಿ ಹಾಕಿಸುವಂತೆ ಸಂಘಕ್ಕೆ ಪೀಠ ನಿರ್ದೇಶಿಸಿದೆ.

ಮುಂಗಡ ಹಣಕ್ಕೆ ನಕಾರ
ನಿವೇಶನ ಬಯಸಿ ಅರ್ಜಿದಾರರೊಬ್ಬರು ನೀಡಿದ್ದ ಮುಂಗಡ ಹಣವನ್ನು ವಾಪಸು ಮಾಡಲು ನಿರಾಕರಿಸಿದ `ಎಕ್ಸ್‌ಟ್ರೀಮ್ ಗೋಲ್ಡನ್ ಪಾಮ್~ ಸಂಸ್ಥೆಗೆ 10ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ  ಗ್ರಾಹಕರ ವೇದಿಕೆ ಆದೇಶಿಸಿದೆ. ಈ ದಂಡದ ಹಣವನ್ನು ಅರ್ಜಿದಾರರಾಗಿರುವ ಜೈಕುಮಾರ್ ಗಿರಿ ಅವರಿಗೆ ಪರಿಹಾರದ ರೂಪದಲ್ಲಿ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಸೂಚಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ನಿವೇಶನಗಳನ್ನು ಖರೀದಿ ಮಾಡಲು ಅರ್ಜಿದಾರರು ಬಯಸಿದ್ದರು. ಈ ಸಂಬಂಧ ಸುಮಾರು ಏಳು ಲಕ್ಷ ರೂ. ಮೊತ್ತವನ್ನು ಅರ್ಜಿದಾರರು ಪಾವತಿ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರಿಗೆ ಸಂಪೂರ್ಣ ಹಣ ನೀಡಲು ಸಾಧ್ಯವಾಗಲಿಲ್ಲ.

ಆದ್ದರಿಂದ ತಾವು ಕೊಟ್ಟ 2.64 ಲಕ್ಷ ರೂ. ವಾಪಸು ನೀಡುವಂತೆ ಸಂಸ್ಥೆಯನ್ನು ಕೋರಿದರು. ಆದರೆ ಅದಕ್ಕೆ ಸಂಸ್ಥೆ ಒಪ್ಪಲಿಲ್ಲ. ಆದುದರಿಂದ ಅರ್ಜಿದಾರರು ವೇದಿಕೆ ಮೊರೆ ಹೋದರು. ಅರ್ಜಿದಾರರು ನೀಡಿದ್ದ ಹಣವನ್ನು, ಅವರು ಹಣ ನೀಡಿದ ದಿನದಿಂದ ಅನ್ವಯ ಆಗುವಂತೆ ಶೇ 12ರ ಬಡ್ಡಿದರಲ್ಲಿ, ಪರಿಹಾರದ ಜೊತೆಗೆ ನೀಡುವಂತೆ ಪೀಠ ಆದೇಶಿಸಿದೆ.

ನೀಡದ ಹಣ: ದಂಡ
ಫ್ಲ್ಯಾಟ್ ಒಂದರ ಬುಕಿಂಗ್ ರದ್ದುಗೊಳಿಸಿದರೂ, ಬುಕಿಂಗ್ ಹಣವನ್ನು ಹಿಂದಕ್ಕೆ ನೀಡದ `ಬ್ರಿಗೇಡ್ ಎಂಟರ್‌ಪ್ರೈಸಸ್~ ಸಂಸ್ಥೆಗೆ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ  ಗ್ರಾಹಕರ ವೇದಿಕೆ ಆದೇಶಿಸಿದೆ.
ಈ ದಂಡದ ಹಣವನ್ನು ಅರ್ಜಿದಾರರಾಗಿರುವ ಸತೀಶ್ ಕುಮಾರ್ ಗೋಪಕುಮಾರ್ ಅವರಿಗೆ ಪರಿಹಾರದ ರೂಪದಲ್ಲಿ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ನಿರ್ದೇಶಿಸಿದೆ.

2010ರ ಮಾರ್ಚ್ ತಿಂಗಳಿನಲ್ಲಿ 2 ಲಕ್ಷ ರೂಪಾಯಿ ಪಾವತಿಸಿ ಸತೀಶ್ ಅವರು ಫ್ಲ್ಯಾಟ್ ಬುಕಿಂಗ್ ಮಾಡಿದ್ದರು. ಆದರೆ ಅದಕ್ಕಿಂತ ಚೆನ್ನಾಗಿರುವ ಫ್ಲ್ಯಾಟ್ ಅವರಿಗೆ ಸಿಕ್ಕ ಹಿನ್ನೆಲೆಯಲ್ಲಿ ಇದನ್ನು ರದ್ದುಗೊಳಿಸಲು ಇಚ್ಛಿಸಿದರು. ಇದನ್ನು ರದ್ದುಗೊಳಿಸಿರುವ ನೋಟಿಸ್ ಅರ್ಜಿದಾರರ ಕೈಸೇರಿದರೂ, ಹಣ ಮಾತ್ರ ಹಿಂದಕ್ಕೆ ಸಿಗಲಿಲ್ಲ. 

ಈಗಾಗಲೇ ಬ್ಯಾಂಕ್‌ನಲ್ಲಿ ಅರ್ಜಿದಾರರು ಸಾಲ ಮಾಡಿದ್ದ ಹಿನ್ನೆಲೆಯಲ್ಲಿ, ಹೊಸ ಫ್ಲ್ಯಾಟ್ ಖರೀದಿಗೆ ಪುನಃ ಸಾಲ ಪಡೆಯುವುದು ಕಷ್ಟವಾಯಿತು. ಇದನ್ನು ತಿಳಿಸಿದರೂ ಸಂಸ್ಥೆ ಹಣ ನೀಡಲಿಲ್ಲ. ಆದುದರಿಂದ ಅವರು ವೇದಿಕೆ ಮೊರೆ ಹೋದರು. ಅರ್ಜಿದಾರರು ನೀಡಿರುವ ಹಣವನ್ನು ಶೇ 9ರ ಬಡ್ಡಿ  ಜೊತೆಗೆ ಹಿಂದಿರುಗಿಸುವಂತೆ ವೇದಿಕೆ ಆದೇಶಿಸಿದೆ. ಜೊತೆಗೆ 3ಸಾವಿರ ರೂ. ಪರಿಹಾರ ನೀಡುವಂತೆಯೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.