ADVERTISEMENT

ತ್ವರಿತ ಶಸ್ತ್ರಚಿಕಿತ್ಸೆ: ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನೀರು, ವಿದ್ಯುತ್‌ನಂತಹ ಮೂಲ ಸೌಕರ್ಯಗಳು ಮಾತ್ರವಲ್ಲ; ಕನಿಷ್ಠ ಆರೋಗ್ಯ ಸೌಲಭ್ಯಗಳೂ ಇಲ್ಲ~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

`ನೋವಾ ಮೆಡಿಕಲ್ ಸೆಂಟರ್~ ಆಶ್ರಯದಲ್ಲಿ `ಅಂಬುಲೇಟರಿ (ತ್ವರಿತ) ಶಸ್ತ್ರಚಿಕಿತ್ಸೆ~ ಕುರಿತು ಶುಕ್ರವಾರ ಪ್ರಾರಂಭವಾದ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ವೃತ್ತಿ ಪ್ರವೇಶಿಸುವಾಗ ಮಾಡುವ ಪ್ರತಿಜ್ಞಾ ವಿಧಿಯನ್ನು ಅನೇಕ ವೈದ್ಯರು ನಂತರದ ದಿನಗಳಲ್ಲಿ ಮರೆತು ಬಿಡುತ್ತಾರೆ. ಅದರಲ್ಲೂ ಸರ್ಕಾರಿ ವೈದ್ಯರು ಜನರ ಸೇವೆ ಸಲ್ಲಿಸುವ ಬದ್ಧತೆಯಿಂದ ಹಿಂದೆ ಸರಿಯಬಾರದು~ ಎಂದು ಅವರು ಕಿವಿಮಾತು ಹೇಳಿದರು.

`ಆರ್ಟ್ ಆಫ್ ಲಿವಿಂಗ್~ ಸಂಸ್ಥೆಯ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, `ಜೈಲು ಮತ್ತು ಆಸ್ಪತ್ರೆಗಳಲ್ಲಿ ಜನರು ಇಲ್ಲವೆಂದರೆ ಅಂತಹ ಸಮಾಜ ಆರೋಗ್ಯದಿಂದಿದೆ ಎಂದರ್ಥ~ ಎಂದರು.

`ಗ್ರಾಮೀಣ ಪ್ರದೇಶದವರ ಪಾಲಿಗೆ ಪ್ರಾಥಮಿಕ ಆರೋಗ್ಯ ಸೇವೆಯೂ ದುರ್ಲಭವಾಗಿದೆ. ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಖಾಸಗಿ ಆಸ್ಪತ್ರೆಗಳು ಮುಂದಾಗಬೇಕು~ ಎಂದರು.

ಸೆಂಟರ್‌ನ ಅಧ್ಯಕ್ಷ ಸುರೇಶ್ ಸೋನಿ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮಹೇಶ್ ರೆಡ್ಡಿ, ವೈದ್ಯಕೀಯ ನಿರ್ದೇಶಕ ಡಾ.ಎಂ.ಜಿ.ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಾರತೀಯ ಅಂಬುಲೇಟರಿ ಶಸ್ತ್ರಚಿಕಿತ್ಸಾ ಸಂಘವನ್ನು (ಐಎಸ್‌ಎಎಸ್) ಉದ್ಘಾಟಿಸಲಾಯಿತು. ಅಂಬುಲೇಟರಿ ಶಸ್ತ್ರಚಿಕಿತ್ಸೆ ಎಂದರೆ 24 ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮನೆಗೆ ಕಳುಹಿಸಿಕೊಡುವ ತ್ವರಿತ ಚಿಕಿತ್ಸಾ ವಿಧಾನವಾಗಿದೆ. ಅಮೆರಿಕದಲ್ಲಿ ಜನಪ್ರಿಯವಾಗಿರುವ ಈ ವಿಧಾನ ಕುರಿತು ಚರ್ಚಿಸಲು ಹಮ್ಮಿಕೊಂಡಿರುವ ಸಮಾವೇಶದಲ್ಲಿ ದೇಶ ವಿದೇಶಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.