ADVERTISEMENT

ದಂಪತಿ ಕೊಲೆ- ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:05 IST
Last Updated 12 ಆಗಸ್ಟ್ 2012, 19:05 IST

ಸಂಪ್ ಕೆಲಸದ ಸೋಗಿನಲ್ಲಿ  ಕೃತ್ಯ ಎಸಗಿದ್ದ ಆರೋಪಿಗಳು

ಬೆಂಗಳೂರು: ಜೆ.ಪಿ.ನಗರ ಒಂದನೇ ಹಂತದಲ್ಲಿ ನಡೆದಿದ್ದ ವೆಂಕಟೇಶಯ್ಯ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಕದಿರೇನಹಳ್ಳಿಯ ಗುರುಪ್ರಸಾದ್ ಮತ್ತು ಆತನ ಇಬ್ಬರು ಸಹಚರರನ್ನು ನಗರದ ಐದನೇ ಎಸಿಎಂಎಂ ನ್ಯಾಯಾಧೀಶರ ಮನೆಗೆ ಭಾನುವಾರ ರಾತ್ರಿ ಹಾಜರುಪಡಿಸಲಾಯಿತು.

`ಆರೋಪಿಗಳಾದ ಗುರುಪ್ರಸಾದ್, ಸರಬಂಡೆಪಾಳ್ಯದ ಸಲ್ಮಾನ್ ಮತ್ತು ಕದಿರೇನಹಳ್ಳಿಯ ನಿತಿನ್ ಘಟನೆ ನಂತರ ತಲೆಮರೆಸಿಕೊಂಡಿದ್ದರು. ಅವರ ಮೊಬೈಲ್ ಕರೆಗಳ ವಿವರ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳಿಂದ ಸುಮಾರು 300 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ~ ಎಂದು ಉನ್ನತ ಪೊಲೀಸ್ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

`ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ್, ನೀರಿನ ತೊಟ್ಟಿಗಳಿಗೆ (ಸಂಪ್) ಕಬ್ಬಿಣದ ಮುಚ್ಚಳ ಅಳವಡಿಸುವ ಮತ್ತು ಕೊಳಾಯಿ ಜೋಡಣೆ ಮಾಡುವ ಕೆಲಸ ಮಾಡುತ್ತಿದ್ದ. ಆತ, ವೆಂಕಟೇಶಯ್ಯ ದಂಪತಿಯ ನೆರೆಹೊರೆಯವರ ಮನೆಗಳ ಸಂಪ್‌ಗಳಿಗೆ ಕೊಳಾಯಿ ಜೋಡಣೆ ಮಾಡಿಕೊಟ್ಟಿದ್ದ. ವೆಂಕಟೇಶಯ್ಯ ದಂಪತಿ, ನೆರೆಹೊರೆಯವರ ಮೂಲಕ ಗುರುಪ್ರಸಾದ್‌ನನ್ನು ಪರಿಚಯಿಸಿಕೊಂಡು ಮನೆಯ ಸಂಪ್‌ಗೆ ಕಬ್ಬಿಣದ ಮುಚ್ಚಳ ಮತ್ತು ಕೊಳಾಯಿ ಜೋಡಣೆ ಮಾಡಿಕೊಡುವಂತೆ ಕೇಳಿಕೊಂಡಿದ್ದರು.

 ಈ ಕೆಲಸ ಮಾಡುವ ನೆಪದಲ್ಲಿ ಅವರ ಮನೆಗೆ ಬಂದಿದ್ದ ಆತ, ದಂಪತಿ ಮಾತ್ರ ಮನೆಯಲ್ಲಿರುವುದನ್ನು ತಿಳಿದು ಅವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಲು ಸಂಚು ರೂಪಿಸಿದ. ಅಲ್ಲದೇ, ಸಂಪ್‌ನ ಮುಚ್ಚಳದ ಅಳತೆ ತೆಗೆದುಕೊಳ್ಳುವ ಸೋಗಿನಲ್ಲಿ ಹಲವು ಬಾರಿ ದಂಪತಿಯ ಮನೆಗೆ ಬಂದು ಹೋಗಿದ್ದ~ ಎಂದು ಮೂಲಗಳು ಹೇಳಿವೆ.

ಕೊಲೆ ಘಟನೆ ನಡೆಯುವ ಹಿಂದಿನ ವಾರ ಸಹ ಆತ, ಇತರೆ ಆರೋಪಿಗಳೊಂದಿಗೆ ಮೂರ‌್ನಾಲ್ಕು ಬಾರಿ ದಂಪತಿಯ ಮನೆ ಬಳಿ ಬಂದು ಕೊಲೆ ಸಂಚನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದ್ದ. ಆದರೆ, ಆ ಸಂದರ್ಭದಲ್ಲೆಲ್ಲಾ ದಂಪತಿ ಮನೆಯಿಂದ ಹೊರಗೆ ಹೋಗಿದ್ದರಿಂದ ಸಂಚು ವಿಫಲವಾಗಿತ್ತು.

ಇದರಿಂದಾಗಿ ಸೋಮವಾರ (ಆ.6) ಮಧ್ಯಾಹ್ನ ಪುನಃ ದಂಪತಿಯ ಮನೆಗೆ ಬಂದಿದ್ದ ಆರೋಪಿಗಳು, ಅವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದರು. ಆರೋಪಿಗಳು ಅಲ್ಲಿಂದ ಪರಾರಿಯಾಗುವ ಮುನ್ನ ಮನೆಯ ಮುಂದಿನ ಬಾಗಿಲನ್ನು ಒಳಗಿನಿಂದ ಬಂದ್ ಮಾಡಿದ್ದರು. ನಂತರ ಹೊರ ಭಾಗದಿಂದ ಹಿಂದಿನ ಬಾಗಿಲ ಬೀಗ ಹಾಕಿ, ಕೀಯನ್ನು ಮನೆಯೊಳಗೆ ಎಸೆದು ಪರಾರಿಯಾಗಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿನೀಡಿದ್ದಾರೆ.

ಪ್ರಕರಣ ಭೇದಿಸಿದ್ದು ಹೇಗೆ?

ADVERTISEMENT

`ಕೊಲೆ ಘಟನೆಯ ನಂತರ ಆರೋಪಿಗಳು, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಸಂಬಂಧಿಕರ ಮನೆಗಳಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಕೊಲೆ ಘಟನೆ ನಡೆಯುವುದಕ್ಕೂ ಎರಡು ತಾಸು ಮುಂಚೆ ವೆಂಕಟೇಶಯ್ಯ ಅವರ ಪತ್ನಿ ಸ್ವರ್ಣಾಂಬ ಅವರು, ತಂಗಿ ಲಲಿತಾ ಅವರಿಗೆ ಕರೆ ಮಾಡಿ ಕೂಲಿ ಕಾರ್ಮಿಕರಿಂದ ಸಂಪ್‌ನ ಕೆಲಸ ಮಾಡಿಸುತ್ತಿರುವುದಾಗಿ ಹೇಳಿದ್ದರು.

ಈ ಸಂಗತಿಯನ್ನು ಲಲಿತಾ ವಿಚಾರಣೆ ವೇಳೆ ತಿಳಿಸಿದ್ದರು. ಈ ಸಂಗತಿ ಮತ್ತು ದಂಪತಿಯ ಅಕ್ಕಪಕ್ಕದ ಮನೆಯವರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ಭೇದಿಸಲಾಯಿತು~ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.