ADVERTISEMENT

ದಾರ್ಶನಿಕರ ಆದರ್ಶ ಪಾಲಿಸಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:35 IST
Last Updated 19 ಜೂನ್ 2011, 19:35 IST

ಕೃಷ್ಣರಾಜಪುರ: `ಸಮಾಜಕ್ಕೆ ಬುದ್ಧ, ಅಂಬೇಡ್ಕರ್ ಅವರಂತಹ ದಾರ್ಶನಿಕರ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ~ ಎಂದು ಬಿಬಿಎಂಪಿ ಸದಸ್ಯ ಬೈರತಿ ಎನ್.ಬಸವರಾಜ್ ಅವರು ಪ್ರತಿಪಾದಿಸಿದರು.

ದೂರವಾಣಿ ನಗರ ವಿದ್ಯಾಮಂದಿರದ ಬಯಲು ರಂಗಮಂದಿರದಲ್ಲಿ ಕರ್ನಾಟಕ ದಲಿತ ಜ್ಞಾನ ಭಾರತಿ ವತಿಯಿಂದ ಏರ್ಪಡಿಸಿದ್ದ ಸಂಘದ ವಾರ್ಷಿಕೋತ್ಸವ, ಬುದ್ಧ ಹಾಗೂ ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

`ಅಶಾಂತಿ, ಅರಾಜಕತೆ, ದೌರ್ಜನ್ಯ ಎಲ್ಲೆಡೆ ಹೆಚ್ಚುತ್ತಿದ್ದು ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಬುದ್ಧ, ಅಂಬೇಡ್ಕರ್ ಹಾಗೂ ಬಸವೇಶ್ವರರು ತಮ್ಮ ಜೀವನವನ್ನು ಮುಡಿಪಾಗಿರಿಸಿದರು. ಆದರೆ, ಈ ಮಹನೀಯರ ಆಚರಣೆಯಲ್ಲಿ ತೋರುವ ಸಂಭ್ರಮ, ಅವರ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಕಾಣುತ್ತಿಲ್ಲ~ ಎಂದು ವಿಷಾದಿಸಿದರು.

ಅಂತರರಾಷ್ಟ್ರೀಯ ಬುದ್ಧ ಸ್ನೇಹ ಕೂಟದ ಕಾರ್ಯದರ್ಶಿ ಡಾ.ಎಚ್.ಆರ್. ಸುರೇಂದ್ರ ಮಾತನಾಡಿ, `ಶೋಷಿತರ ಧ್ವನಿಯಾಗಿ ಜೀವನದ ಉದ್ದಕ್ಕೂ ಹೋರಾಟ ನಡೆಸಿದ ಅಂಬೇಡ್ಕರ್ ಅವರು  ಪರಿವರ್ತನೆ ಬಯಸಿ ಕೊನೆಗೆ ಬೌದ್ಧ ಧರ್ಮ ಸ್ವೀಕರಿಸಿದರು. ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಮುಂದೆ ಬಂದವರು ಕೆಳಸ್ತರದಲ್ಲಿರುವವರಿಗೆ ಮಾರ್ಗದರ್ಶನ ನೀಡಬೇಕು~ ಎಂದು ಸಲಹೆ ಮಾಡಿದರು.

ಹೊಲೆಯ ಮಾದಿಗರ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ದೊಡ್ಡಮನಿ ದಶರತ್ ಮಾತನಾಡಿದರು. ಬೆಂಗಳೂರು ಸ್ಫೂರ್ತಿ ಧಾಮದ ಎಸ್.ಧಮ್ಮಾನಂದ ಬಂತೇಜಿ, ಹೊಲೆಯ-ಮಾದಿಗರ ಸಂಘದ ಕಾರ್ಯದರ್ಶಿ ರಾಜಶೇಖರ್, ದಲಿತ ಜ್ಞಾನ ಭಾರತಿ ಸಂಘದ ಅಧ್ಯಕ್ಷ ಜೆ.ಸಿ.ಪ್ರಕಾಶ್, ಸಾಮಾಜಿಕ ಕಾರ್ಯಕರ್ತ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಮಂದಿರದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.