ADVERTISEMENT

ದೇವಸ್ಥಾನ ಪಕ್ಕ ಇಂದಿರಾ ಕ್ಯಾಂಟೀನ್‌: ವಿರೋಧ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:37 IST
Last Updated 4 ಅಕ್ಟೋಬರ್ 2017, 19:37 IST

ಬೆಂಗಳೂರು: ಶಿವಾಜಿನಗರದ ರಾಮಕೃಷ್ಣ ಮಠದ ರಸ್ತೆಯಲ್ಲಿರುವ ಅಂಡಾಳಮ್ಮ ದೇವಸ್ಥಾನದ ಖಾಲಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಬಿಬಿಎಂಪಿ ಮುಂದಾಗಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಅಂಡಾಳಮ್ಮ ದೇವಸ್ಥಾನದ ಖಾಲಿ ಜಾಗವು 1917ರಲ್ಲಿ ಜಂಗಮ ರೆಡ್ಡಿ ಎಂಬುವವರ ಮಕ್ಕಳು ದೇವಸ್ಥಾನಕ್ಕೆ ದಾನ ನೀಡಿರುವ ಜಾಗವಾಗಿದೆ. ಇಲ್ಲಿ ಕ್ಯಾಂಟೀನ್‌ ನಿರ್ಮಿಸುವ ಯೋಜನೆ ಕೈಬಿಡಬೇಕು’ ಎಂದು ಹಳೆತೇರು
ಬೀದಿ ನಿವಾಸಿ ಚಂದ್ರು ಮನವಿ ಮಾಡಿದ್ದಾರೆ.

ಕ್ಯಾಂಟೀನ್‌ ನಿರ್ಮಾಣ ಖಚಿತ: ‘79ನೇ ವಾರ್ಡ್‌ನಲ್ಲಿ ಬಿಬಿಎಂಪಿಗೆ ಸೇರಿದ ಜಾಗವನ್ನೇ ಅತಿಕ್ರಮಿಸಿ ಅಂಡಾಳಮ್ಮ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನದ ಬಗ್ಗೆ ನಮ್ಮ ತಕರಾರು ಇಲ್ಲ. ದೇವಸ್ಥಾನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಮುಂದಾದರೆ, ಆ ಜಾಗವನ್ನೂ ದೇವಸ್ಥಾನಕ್ಕೆ ಬಿಟ್ಟುಕೊಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಖಾಲಿ ಇರುವ ಪಾಲಿಕೆಯ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ನಿರ್ಧರಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ದೇವಸ್ಥಾನದ ಪಕ್ಕದಲ್ಲೇ ಕ್ಯಾಂಟೀನ್‌ ಇದ್ದರೆ ಬಡವರಿಗೂ, ದೇವಸ್ಥಾನಕ್ಕೆ ಬರುವ ಭಕ್ತರಿಗೂ ಅನುಕೂಲವಾಗುತ್ತಿದೆ. ಕ್ಯಾಂಟೀನ್‌ನಿಂದ ದೇವಸ್ಥಾನಕ್ಕೆ ಮತ್ತು ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದನ್ನು ವಾರ್ಡ್‌ನ ಪಾಲಿಕೆ ಸದಸ್ಯರಿಗೂ ಮತ್ತು ಸ್ಥಳೀಯ ನಿವಾಸಿಗಳಿಗೂ ಮನವರಿಕೆ ಮಾಡಿಕೊಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.