ADVERTISEMENT

‘ದೇಶದಲ್ಲಿ ಭಯದ ವಾತಾವರಣ’

ಪತ್ರಕರ್ತ ಇಂದೂಧರ ಹೊನ್ನಾಪುರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:55 IST
Last Updated 13 ಮಾರ್ಚ್ 2018, 19:55 IST

ಬೆಂಗಳೂರು: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ಏಕ ಧರ್ಮ ಹಾಗೂ ಏಕ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರಲಾಗುತ್ತಿದೆ’ ಎಂದು  ಪತ್ರಕರ್ತ ಇಂದೂಧರ ಹೊನ್ನಾಪುರ ಆರೋಪಿಸಿದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೋಮುವಾದ, ಒಡೆದು ಆಳುವ ನೀತಿ ಭಾರತದ ಸಂಸ್ಕೃತಿ ಅಲ್ಲ. ನಮ್ಮ ಪರಂಪರೆಯನ್ನು ಉಳಿಸಲು ಮುಂಬರುವ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಯನ್ನು ಸೋಲಿಸಬೇಕಾಗಿದೆ. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಹೋರಾಟವಲ್ಲ, ಇದು ಕೋಮುವಾದಿ ಹಾಗೂ ದೇಶದ್ರೋಹಿಗಳ ವಿರುದ್ಧದ ಹೋರಾಟ. ಜಾತ್ಯತೀತ ಶಕ್ತಿಗಳು ಒಂದಾದರೆ ಕೋಮುವಾದಿಗಳಿಗೆ ನೆಲೆ ಇರುವುದಿಲ್ಲ’ ಎಂದರು.

ADVERTISEMENT

ವೇದಿಕೆಯ ಗೌರವಾಧ್ಯಕ್ಷ ಎ.ಕೆ. ಸುಬ್ಬಯ್ಯ ಮಾತನಾಡಿ, ‘ಮೋದಿ ಸರ್ಕಾರ ಜನಪರವಾದ ಯಾವುದೇ ಕೆಲಸ ಮಾಡಿಲ್ಲ. ದೇಶದಲ್ಲಿ ಬೆಂಕಿ ಹಚ್ಚುವ ಕೆಲಸವನ್ನೇ ಹೆಚ್ಚು ಮಾಡಿದೆ. ಸಂವಿಧಾನಕ್ಕೇ ಬೆದರಿಕೆ ಇದೆ. ಇದು ಅಪಾಯಕಾರಿ ಬೆಳವಣಿಗೆ. ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಬಿಜೆಪಿ ಜಾತ್ಯತೀತ ಮತಗಳನ್ನು ಒಡೆಯುವ ಅಡ್ಡ ಮಾರ್ಗ ಅನುಸರಿಸುತ್ತಿದೆ. ಬಿಜೆಪಿಯೇ ಕುಮ್ಮಕ್ಕು ನೀಡಿ ಪಕ್ಷಗಳನ್ನು ಸೃಷ್ಟಿಸುತ್ತಿದೆ. ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಉದಯವಾಗಿರುವ ಎಂಇಪಿ ಪಕ್ಷ ಲಕ್ಷಾಂತರ ರೂಪಾಯಿ ವ್ಯಯಿಸಿ ಜಾಹೀರಾತು ನೀಡುತ್ತಿದೆ. ಆ ಪಕ್ಷಕ್ಕೆ ಅಷ್ಟು ಹಣ ಎಲ್ಲಿಂದ ಬರುತ್ತಿದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.