ADVERTISEMENT

ದೇಶದಲ್ಲಿ ವಿಷಮ ರಾಜಕೀಯ ಸ್ಥಿತಿ

ವಾಟಾಳ್‌ ನಾಗರಾಜ್‌ ಜನ್ಮದಿನ ಕಾರ್ಯಕ್ರಮದಲ್ಲಿ ಎಂ.ವಿ.ರಾಜಶೇಖರನ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST
ವಾಟಾಳ್‌ ನಾಗರಾಜ್‌ ಅಭಿಮಾನಿಗಳ ಸಂಘವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ವಾಟಾಳ್‌ ನಾಗರಾಜ್‌ ಅವರಿಗೆ ಖಡ್ಗ ನೀಡಿ ಸನ್ಮಾನಿಸಿದರು. ವಾಟಾಳ್‌ ನಾಗರಾಜ್‌ ಅವರ ಪುತ್ರಿ ಅನುಪಮಾ, ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಚಿತ್ರದಲ್ಲಿದ್ದಾರೆ
ವಾಟಾಳ್‌ ನಾಗರಾಜ್‌ ಅಭಿಮಾನಿಗಳ ಸಂಘವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ವಾಟಾಳ್‌ ನಾಗರಾಜ್‌ ಅವರಿಗೆ ಖಡ್ಗ ನೀಡಿ ಸನ್ಮಾನಿಸಿದರು. ವಾಟಾಳ್‌ ನಾಗರಾಜ್‌ ಅವರ ಪುತ್ರಿ ಅನುಪಮಾ, ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಚಿತ್ರದಲ್ಲಿದ್ದಾರೆ   

ಬೆಂಗಳೂರು: ‘ದೇಶದಲ್ಲಿ ಸದ್ಯದ ರಾಜ­ಕೀಯ ಪರಿಸ್ಥಿತಿ ವಿಷಮವಾಗಿದೆ. ಭ್ರಷ್ಟಾ­ಚಾರ ಹಾಗೂ ಅಪರಾಧ ಹಿನ್ನೆಲೆಯ ಜನರೇ ಜನಪ್ರತಿನಿಧಿಗಳಾಗಿ ಆರಿಸಿ ಬರುತ್ತಿದ್ದಾರೆ’ ಎಂದು ವಿಧಾನ ಪರಿ­ಷತ್‌ ಸದಸ್ಯ ಎಂ.ವಿ.ರಾಜಶೇಖರನ್‌ ವಿಷಾದಿಸಿದರು.

ವಾಟಾಳ್‌ ನಾಗರಾಜ್‌ ಅಭಿಮಾನಿ-ಗಳ ಸಂಘವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರ ಜನ್ಮದಿನ ಕಾರ್ಯ­ಕ್ರಮ­ದಲ್ಲಿ ಅವರು ಮಾತನಾಡಿದರು.

‌‘ನಿರಂತರವಾಗಿ ಹೋರಾಟ ಮಾಡಿ­ಕೊಂಡು ಬಂದ ವಾಟಾಳ್‌ ಅವರನ್ನು ಜನ ಚುನಾವಣೆಯಲ್ಲಿ ಸೋಲಿಸಿ­ದ್ದಾರೆ. ವಾಟಾಳ್‌ ಇಲ್ಲದ ಶಾಸನಸಭೆಯನ್ನು ಊಹಿಸಿ­ಕೊಳ್ಳು­ವುದೂ ಸಾಧ್ಯವಿಲ್ಲ’ ಎಂದು ಹೇಳಿದರು.

‘ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ­ಯವರಿಗೆ ಮನವಿ ಮಾಡಿದ್ದೆ. ಈ ವಿಷಯ­ವನ್ನು ಅವರಿಬ್ಬರೂ ಮರೆತಿರು­ವಂತಿದೆ. ಜನರ ದನಿಯಾಗಿ ವಾಟಾಳ್‌  ವಿಧಾನಸೌಧದಲ್ಲಿರಬೇಕಾದ್ದು ಅಗತ್ಯ’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವ­ರಾಜ ಹೊರಟ್ಟಿ ಮಾತನಾಡಿ, ‘ಅಧಿ­ಕಾರ ಇದ್ದರೂ, ಇರದಿದ್ದರೂ ವಾಟಾಳ್‌ ನಾಗ­ರಾಜ್‌ ಹೋರಾಟ­ದಲ್ಲಿ ಮುಂದಿರು­ತ್ತಾರೆ. ಅವರು ವಿಧಾನ­ಸಭೆಯಲ್ಲಿದ್ದರೆ ಮುತ್ತೈದೆ ಹಣೆಯ ಮೇಲೆ ಕುಂಕುಮ­ವಿದ್ದಂತೆ ವಿಧಾನ­ಸೌಧಕ್ಕೇ ವಿಶೇಷ ಮೆರಗು ಬರುತ್ತಿತ್ತು’ ಎಂದರು.

ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಮಾತ­ನಾಡಿ, ‘ರಾಜ್ಯದ ನಾಡು, ನುಡಿ, ನೆಲ, ಜಲದ ವಿಚಾರ ಬಂದಾಗಲೆಲ್ಲಾ ವಾಟಾಳ್‌ ದನಿ ಎತ್ತುತ್ತಲೇ ಬಂದಿ­ದ್ದಾರೆ. ಆದರೂ ಜನ ಅವರನ್ನು ಚುನಾವಣೆಯಲ್ಲಿ ಸೋಲಿಸಿರುವುದು ದುರಂತ. ಮುಂದಿನ ಚುನಾವಣೆಯಲ್ಲಿ ಅವರು ವಿಧಾನಸಭೆಗೆ ಆಯ್ಕೆಯಾಗಲಿ ಎಂಬುದು ನನ್ನ ಹಾರೈಕೆ’ ಎಂದರು.

‘ರೈತರು ಹಳ್ಳಿ ಬಿಡಬಾರದು, ಹಸಿವಿನಿಂದ ಬಳಲಬಾರದು. ಧರ್ಮ, ಜಾತಿಯ ವಿಷ ಬೀಜದ ಮಧ್ಯೆ ಕನ್ನ­ಡತನ ಮರೆಯಾಗುತ್ತಿದೆ. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವವರೆಗೂ ದೇಶದಲ್ಲಿ ಸಮಾನತೆ ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಟಾಳ್‌ ನಾಗರಾಜ್‌, ‘1962ರ ಸೆಪ್ಟೆಂಬರ್ 7ರಂದು ಮೆಜೆಸ್ಟಿಕ್‌ನ ಅಲಂಕಾರ್ ಚಿತ್ರಮಂದಿರದಲ್ಲಿ    ತಮಿಳು ಚಿತ್ರದ ಪ್ರದರ್ಶನದ ವಿರುದ್ಧ ಪ್ರತಿ­ಭಟನೆ ನಡೆಸುತ್ತಿದ್ದಾಗ     ಪೊಲೀಸ್‌ ಅಧಿಕಾರಿ ಲೂಯಿಸ್‌ ಎಂಬಾತ ನನ್ನನ್ನು ಉಪ್ಪಾರಪೇಟೆ ಠಾಣೆಗೆ ಎಳೆದು­ಕೊಂಡು ಹೋಗಿ ಬೂಟುಗಾಲಿನಿಂದ ಒದ್ದ. ಅಂದಿನಿಂದ ಬೂಟಿನ ಏಟು ಬಿದ್ದ ದಿನವೇ ನನ್ನ ಜನ್ಮದಿನವಾಗಿದೆ’ ಎಂದರು.

‘ನಾಡಿನಲ್ಲಿ ನನ್ನ ಹೋರಾಟಕ್ಕೆ ಅನೇಕರು ಬೆಂಬಲ ನೀಡಿದ್ದಾರೆ. ಎಲ್ಲೇ ಹೋದರೂ ಜನ ನನ್ನನ್ನು ಅಭಿಮಾನ­ದಿಂದ ಕಾಣುತ್ತಾರೆ. ಚುನಾವಣೆಯಲ್ಲಿ ಸೋಲು – ಗೆಲುವು ಸಹಜ. ಆದರೆ, ಜನ ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ನಾನು ಋಣಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.