ADVERTISEMENT

ದೊಡ್ಡಬಳ್ಳಾಪುರ: ಡಕಾಯಿತರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರಕ್ಕೆ ಬರುತ್ತಿದ್ದ ಭಕ್ತಾದಿಗಳನ್ನು ಅಡ್ಡಗಟ್ಟಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಡಕಾಯಿತರನ್ನು ಬಂಧಿಸುವಲ್ಲಿ ಇಲ್ಲಿನ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ದರೋಡೆಕೋರರ ಗುಂಪಿನಲ್ಲಿದ್ದ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಸಬ್‌ಇನ್ಸ್‌ಪೆಕ್ಟರ್ ವಿ.ಎಸ್.ಶಬರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪಾಲ್‌ಪಾಲ್ ದಿನ್ನೆ ಗ್ರಾಮದ ರವಿ (22), ಮುನಿರಾಜು (23) ಎಂಬುವವರು ಭಕ್ತರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇದೇ ಗ್ರಾಮದ ಓಬಳೇಶ್ ಎಂಬಾತ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ.
 
ಗಂಗರಾಜು ಎಂಬಾತನನ್ನು ಕಳೆದ 15 ದಿನಗಳ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಮಹೇಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಾಮೂಹಿಕ ಅತ್ಯಾಚಾರ: ಬಂಧಿತರು ಕಳೆದ ಒಂದು ವರ್ಷದಿಂದ ಈಚೆಗೆ 10ಕ್ಕೂ ಹೆಚ್ಚು ಸಾಮೂಹಿಕ ಅತ್ಯಾಚಾರಗಳನ್ನು ನಡೆಸಿದ್ದಾರೆ. ಈ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಒಳಗಾಗಿರುವವರು ದೂರು ನೀಡದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವುದು ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಡಕಾಯಿತರ ತಂಡ ಸಾಮೂಹಿಕ ಅತ್ಯಾಚಾರ ನಡೆಸಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಿ.ಡಿಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿತ್ತು ಎನ್ನಲಾಗಿದೆ. ಈ ಸಿ.ಡಿ ವಿಷಯ ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ರಾಜ್ಯದಾದ್ಯಂತ ಸುದ್ದಿಯಾಗಿತ್ತು.

ಯುವ ಪ್ರೇಮಿಗಳೇ ಟಾರ್ಗೆಟ್:
ಸಾಮಾನ್ಯವಾಗಿ ಘಾಟಿ ದೇವಾಲಯಕ್ಕೆ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಯುವ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಘಾಟಿ ಕ್ಷೇತ್ರ ನಗರದಿಂದ 20 ಕಿ.ಮೀ ದೂರದಲ್ಲಿದೆ.

ಪಾಲ್‌ಪಾಲ್ ದಿನ್ನೆ ಗ್ರಾಮದ ರಸ್ತೆಯ ಎರಡೂ ಬದಿಯಲ್ಲಿ ಸಾಕಷ್ಟು ಬೆಟ್ಟ ಗುಡ್ಡ ಪ್ರದೇಶ ಇದೆ. ಇಲ್ಲಿ ಯುವ ಪ್ರೇಮಿಗಳು ಕುಳಿತಾಗ ದನ, ಕುರಿಗಳನ್ನು ಮೇಯಿಸುವವರ ಸೋಗಿನಲ್ಲಿ ಡಕಾಯಿತರು ಪ್ರೇಮಿಗಳ ಮೇಲೆ ಎರಗುತ್ತಿದ್ದರು. ಚಿನ್ನಾಭರಣ ದೋಚಿ ಅತ್ಯಾಚಾರ ಎಸಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.