ADVERTISEMENT

ದ್ವಿಚಕ್ರ ವಾಹನ ಸಂಚಾರ ನಿಷೇಧ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ.

‘ಅ. 14ರಂದು ಕ್ಯಾಬ್‌ ಡಿಕ್ಕಿ ಹೊಡೆದಿದ್ದರಿಂದ ಬೈಕ್‌ ಸೇತುವೆಯಿಂದ ಕೆಳಗೆ ಬಿದ್ದು ಸವಾರರಾದ ನೀಲಸಂದ್ರದ ಜಾಹೀರ್‌ ಹುಸೇನ್‌ (42) ಹಾಗೂ ಮಹಮ್ಮದ್‌ ಫಕ್ರುದ್ದೀನ್‌ (37) ಮೃತಪಟ್ಟಿದ್ದರು. 2016ರಲ್ಲೂ ಇಬ್ಬರು ಬೈಕ್‌ ಸವಾರರು ಮೃತಪಟ್ಟಿದ್ದರು. ಹೀಗಾಗಿ ದ್ವಿಚಕ್ರವಾಹನಗಳ ಸಂಚಾರ ನಿಷೇಧದ ಬಗ್ಗೆ ಪ್ರಸ್ತಾವ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸ್ತಾವ ಸಿದ್ಧವಾದ ಬಳಿಕ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ನೀಡುತ್ತೇವೆ. ಅವರು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಿದ್ದಾರೆ. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರವೇ ಸಂಚಾರ ನಿಷೇಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದರು.

ADVERTISEMENT

ಎನ್‌ಎಚ್‌ಎಐ ಅಧಿಕಾರಿಗಳ ಆಕ್ಷೇಪ: ಸಂಚಾರ ನಿಷೇಧಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮೇಲ್ಸೇತುವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಗುತ್ತಿಗೆದಾರರು ಸದ್ಯ ಒಂದು ಬೈಕ್‌ಗೆ ₹25 ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಈಗ ವಾಹನಗಳ ನಿಷೇಧ ಮಾಡಿದರೆ ಅವರಿಗೆ ನಷ್ಟ ಉಂಟಾಗಲಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಸ್ತಾವ ಕೈಬಿಡುವಂತೆ ಸಂಚಾರ ಪೊಲೀಸರಿಗೆ ಹೇಳುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಿಷೇಧದಿಂದ ತೊಂದರೆ: ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಹಲವು ಕಂಪೆನಿಗಳ ಉದ್ಯೋಗಿಗಳು, ನಿತ್ಯವೂ ಬೈಕ್‌ನಲ್ಲಿ ಮೇಲ್ಸೇತುವೆ ಮೂಲಕ ಸಂಚರಿಸುತ್ತಾರೆ. ನಿಷೇಧ ಜಾರಿಗೆ ಬಂದರೆ ಅವರೆಲ್ಲರಿಗೂ ತೊಂದರೆ ಉಂಟಾಗಲಿದೆ.

‘ನಿತ್ಯವೂ ಕಚೇರಿಗೆ ಬೇಗನೇ ಹೋಗಲು ಮೇಲ್ಸೇತುವೆ ಅನುಕೂಲವಾಗಿದೆ. ಸಂಜಯನಗರದಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಬೈಕ್‌ನಲ್ಲಿ 30 ನಿಮಿಷದಲ್ಲಿ ತಲುಪುತ್ತಿದ್ದೇನೆ. ಸಂಚಾರ ನಿಷೇಧ ಮಾಡಿದರೆ, ಪುನಃ ದಟ್ಟಣೆಯಲ್ಲಿ ಸಿಲುಕಬೇಕಾತ್ತದೆ’ ಎಂದು ಟೆಕಿ ದೀಪಕ್‌ ಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.