ADVERTISEMENT

`ಧರ್ಮ, ಜಾತಿ ಹೆಸರಿನಲ್ಲಿ ಅಸಮಾನತೆ ಸೃಷ್ಟಿ ನಿಲ್ಲಬೇಕು'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:40 IST
Last Updated 24 ಡಿಸೆಂಬರ್ 2012, 19:40 IST

ಬೆಂಗಳೂರು: `ಧರ್ಮ, ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ಸಾರ್ವಜನಿಕರ ನಡುವೆ ಅಸಮಾನತೆಯನ್ನು ಸೃಷ್ಟಿಸುವುದು ನಿಲ್ಲಬೇಕು' ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು. 

ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪೆರಿಯಾರ್ ಸ್ಮರಣೆ ಮತ್ತು ಡಾ.ಬಿ.ಅರ್.ಅಂಬೇಡ್ಕರ್ ಅವರು ಮನುಸ್ಮೃತಿ ದಹನದ ಸ್ಮರಣೆಯ ಅಂಗವಾಗಿ `ಸಂವಿಧಾನದ ಆಶಯಕ್ಕಾಗಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ' ವಿಷಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಯಾವುದೇ ವ್ಯಕ್ತಿಗೆ ಅವನು ಮಾಡುವ ಕೆಲಸದಿಂದ ಘನತೆ ಬರುತ್ತದೆ. ಜಾತಿಯಿಂದ ಅಲ್ಲ. ಎಲ್ಲರೂ ಮನುಸ್ಮೃತಿಯನ್ನು ಮಾನಸಿಕವಾಗಿ ಸುಡುವ ಕೆಲಸ ಮಾಡಬೇಕು. ನಮ್ಮ ಸಂವಿಧಾನ ನಮಗೆ ಧರ್ಮಶಾಸ್ತ್ರವಾಗಿದೆ' ಎಂದರು.

ಅಹಿಂದ ಮುಖಂಡ ಎನ್.ಎ.ನರಸಿಂಹಯ್ಯ ಮಾತನಾಡಿ, `ಪೆರಿಯಾರ್ ಮತ್ತು ಅಂಬೇಡ್ಕರ್ ಅವರು ಶೋಷಣೆಗೆ ಒಳಗಾದ ದಲಿತರ ಪರವಾಗಿ ಹೋರಾಡಿದರು. ವೈಜ್ಞಾನಿಕತೆ ಮತ್ತು ಮಾನವೀಯ ಚಿಂತನೆಯ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ನಾಯಕರು' ಎಂದರು.

`ಮನುಸ್ಮೃತಿಯಿಂದಾಗಿ ಜಾತಿ ಆದಾರದ ಮೇಲೆ ಶಿಕ್ಷೆ ನೀಡಲಾಗುತ್ತಿತ್ತು. ಇದನ್ನು ದಹನ ಮಾಡಿರುವುದು ಒಂದು ಐತಿಹಾಸಿಕ ಮಹತ್ವದ ಘಟನೆ. ಮನುವಾದಿ ಚಿಂತನೆಯನ್ನು ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು' ಎಂದು  ಮನವಿ ಮಾಡಿದರು. 

ಲೇಖಕ ರುದ್ರಪ್ಪ ಹನಗವಾಡಿ, ವಕೀಲ ಸುಭಾಷ್, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಾಜಗೋಪಾಲ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.