ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಬೆಂಗಳೂರು: ಮೃತ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿನ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ ಬಳಿಯ ಚಾಮುಂಡಿನಗರದ ಗೋಪಾಲಕೃಷ್ಣ (54) ಮತ್ತು ಜೆ.ಪಿ.ನಗರ ಒಂದನೇ ಹಂತದ ರಂಗಸ್ವಾಮಿ (50) ಬಂಧಿತರು. ಆರೋಪಿಗಳು ವಿಜಯನಗರ ಕೈಗಾರಿಕಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಏಜೆಂಟ್ ನಾಗೇಂದ್ರ ಎಂಬುವರ ಹೆಸರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಿ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಿತ್ರಿ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲೀಕರಾಗಿದ್ದ ನಾಗೇಂದ್ರ ಅವರು ನಾಗರಬಾವಿ, ಯಶವಂತಪುರ ಸುತ್ತಮುತ್ತ ಸುಮಾರು 45 ಎಕರೆ ಜಮೀನು ಖರೀದಿಸಿದ್ದರು. ಆ ಜಮೀನಿನಲ್ಲಿ ನಿವೇಶನ ನೀಡುವುದಾಗಿ ಹೇಳಿ ವಿಜಯನಗರ ಕೈಗಾರಿಕಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಂದ 1.80 ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ, ನಿವೇಶನಗಳನ್ನು ಹಂಚಿಕೆ ಮಾಡಿರಲಿಲ್ಲ. ಈ ಸಂಬಂಧ ಸಂಘದ ಸದಸ್ಯರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಾಗೇಂದ್ರ ಅವರಿಗೆ ಸೇರಿದ ಆಸ್ತಿಗಳನ್ನು ಆ ಸಂಘಕ್ಕೆ ವಹಿಸಿ ಆದೇಶ ಹೊರಡಿಸಿತ್ತು. ಈ ನಡುವೆ ನಾಗೇಂದ್ರ ಅವರು 1996ರಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಆ ಜಮೀನನ್ನು ಗಿರೀಶ್‌ಕುಮಾರ್ ಎಂಬುವರಿಗೆ 56 ಲಕ್ಷಕ್ಕೆ ಮಾರಾಟ ಮಾಡಿ ನೋಂದಣಿ ಸಹ ಮಾಡಿಸಿಕೊಟ್ಟಿದ್ದರು. ಅಲ್ಲದೇ 20 ಲಕ್ಷ ರೂಪಾಯಿ ಮುಂಗಡ ಹಣ ಪಡೆದಿದ್ದರು. ಗೋಪಾಲಕೃಷ್ಣ ತಾನೇ ನಾಗೇಂದ್ರ ಎಂದು ಹೇಳಿಕೊಂಡು ಈ ಕೃತ್ಯ ಎಸಗಿದ್ದ. ಈ ಸಂಬಂಧ ವಿಜಯನಗರ ಕೈಗಾರಿಕಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ರಾಜೇಂದ್ರ ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು.

ಬಂಧಿತರಿಂದ 10 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಾಧ (ಪೂರ್ವ) ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಜಿ.ಟಿ.ಅಜ್ಜಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.