ADVERTISEMENT

ನಗರದ ಮಹಿಳೆಯರಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚು: ಅಧ್ಯಯನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:25 IST
Last Updated 25 ಅಕ್ಟೋಬರ್ 2017, 19:25 IST

ಬೆಂಗಳೂರು: ಬೆಂಗಳೂರು ನಗರದಲ್ಲಿ ಪುರುಷರಿಗಿಂತ ಮಹಿಳಾ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಂಕಿ– ಅಂಶಗಳು ತಿಳಿಸಿವೆ.

2012 ರಿಂದ 2014ರ ಅವಧಿಯಲ್ಲಿ ನಡೆಸಿದ ಅಧ್ಯಯನ ಪ್ರಕಾರ, ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ 4,547 ಮಹಿಳೆಯರು ಮತ್ತು 3,824 ಪುರುಷರು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಜನಸಂಖ್ಯೆ ಆಧಾರಿತ ಕ್ಯಾನ್ಸರ್‌ ನೋಂದಣಿಯಿಂದ ಈ ಮಾಹಿತಿ ಲಭಿಸಿದೆ.

ನಗರದ ಮಹಿಳೆಯರಲ್ಲಿ  ಸ್ತನ ಕ್ಯಾನ್ಸರ್‌  ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗುತ್ತಿದೆ. ಸ್ತನ ಕ್ಯಾನ್ಸರ್‌ನಲ್ಲಿ ದೆಹಲಿ (ಶೇ 41), ಚೆನ್ನೈ (ಶೇ 37.9) ಬಳಿಕ ಬೆಂಗಳೂರು(ಶೇ 34.4) ಮೂರನೇ ಸ್ಥಾನದಲ್ಲಿದೆ. ಬ್ರೈನ್‌ ಟ್ಯೂಮರ್‌ನಲ್ಲಿ ಸಿಕ್ಕಿಂ ಬಳಿಕ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, ಪುರುಷರಲ್ಲಿ ಬ್ರೈನ್‌ ಟ್ಯೂಮರ್‌ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ADVERTISEMENT

‘ಸ್ವತಂತ್ರವಾಗಿರಲು ಬಯಸುವ ಮಹಿಳೆಯರು ತೀರಾ ವಿಳಂಬವಾಗಿ ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾರೆ. ಸ್ತನ ಕ್ಯಾನ್ಸರ್‌ ಹೆಚ್ಚಲು ಇದೂ ಒಂದು ಮುಖ್ಯ ಕಾರಣ. ಮಗುವಿಗೆ ಒಂದು ವರ್ಷ ಎದೆ ಹಾಲು ಕುಡಿಸುವುದರಿಂದ ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ’ ಎಂದು ಹೆಲ್ತ್‌ ಕೇರ್‌ ಗ್ಲೋಬಲ್‌ ಆಸ್ಪತ್ರೆಯ ರೇಡಿಯಾಲಜಿಸ್ಟ್‌ ಡಾ.ಶಶಿಕಲಾ ಪ್ರಭಾಕರನ್‌ ತಿಳಿಸಿದ್ದಾರೆ.

‘ಸಾಕಷ್ಟು ಜನರಲ್ಲಿ ಬೊಜ್ಜು ಸಮಸ್ಯೆ ಕಾಡುತ್ತಿದೆ. ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಆಗುವುದರಿಂದ ಕ್ಯಾನ್ಸರ್‌ ಪ್ರಮಾಣ ಆಗುತ್ತಿದೆ’ ಎಂದು ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಡಾ. ಎಸ್‌.ಕೃಷ್ಣಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.