ADVERTISEMENT

ನಗರ ಜಿಲ್ಲೆಯಲ್ಲಿ ಕೈ–ಕಮಲ ಸಮಬಲ

ದಾಸರಹಳ್ಳಿಯಲ್ಲಿ ಬಿಜೆಪಿಗೆ ಆಘಾತ

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ನಗರ ಜಿಲ್ಲೆಯಲ್ಲಿ ಕೈ–ಕಮಲ ಸಮಬಲ
ನಗರ ಜಿಲ್ಲೆಯಲ್ಲಿ ಕೈ–ಕಮಲ ಸಮಬಲ   

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಬಲದ ಕಾದಾಟ ನಡೆಸಿದ್ದು, ತಲಾ ಮೂರು ಕ್ಷೇತ್ರಗಳನ್ನು ಗೆದ್ದಿವೆ. ದಾಸರಹಳ್ಳಿ ಕ್ಷೇತ್ರದಲ್ಲಿ ಕಮಲ ಪಕ್ಷಕ್ಕೆ ಜೆಡಿಎಸ್‌ ಆಘಾತ ನೀಡಿದೆ.

2013ರ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹಾಗೂ ಮೂರು ಕ್ಷೇತ್ರಗಳಲ್ಲಿ ‘ಕೈ’ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಹಾಲಿ ಶಾಸಕ ಎಸ್‌.ಮುನಿರಾಜು ಅವರಿಗೆ ಜೆಡಿಸ್‌ನ ಆರ್‌.ಮಂಜುನಾ‌ಥ್‌ (ಗನ್‌ಮ್ಯಾನ್‌ ಮಂಜಪ್ಪ) ಸೋಲಿನ ರುಚಿ ತೋರಿಸಿದ್ದಾರೆ. ಎಸ್‌.ಎಂ.ಕೃಷ್ಣ ಅವರಿಗೆ ಗನ್‌ಮ್ಯಾನ್‌ ಆಗಿದ್ದ ಮಂಜುನಾಥ್‌ ಅವರು ಕೆಲವು ತಿಂಗಳ ಹಿಂದೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಾಲಿಕೆ ಚುನಾವಣೆಗೆ ಎರಡು ಬಾರಿ ಸ್ಪರ್ಧಿಸಿ ಸೋತಿದ್ದ ಅವರಿಗೆ ಈಗ ಗೆಲುವಿನ ಸಿಹಿ ಸಿಕ್ಕಿದೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಮುನಿರಾಜು ಮುಗ್ಗರಿಸಿದ್ದಾರೆ. ಏಳು ಸುತ್ತುಗಳ ಮತ ಎಣಿಕೆವರೆಗೂ ಮುನಿರಾಜು ಮುನ್ನಡೆಯಲ್ಲಿದ್ದರು. ಬಳಿಕ ಚಿತ್ರಣ ಬದಲಾಗಿ ಮಂಜುನಾಥ್ ಅವರ ಅಂತರ ಹೆಚ್ಚುತ್ತಲೇ ಸಾಗಿತು.

ADVERTISEMENT

ಯಶವಂತಪುರ ಕ್ಷೇತ್ರದಲ್ಲಿ ಆರಂಭದಿಂದಲೂ ಜೆಡಿಎಸ್‌ನ ಟಿ.ಎನ್‌.ಜವರಾಯಿಗೌಡ ಭಾರಿ ಅಂತರದ ಮುನ್ನಡೆ ಸಾಧಿಸಿದ್ದರು. 18 ಸುತ್ತಿನ ವರೆಗೂ ಅವರೇ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯ ಎರಡು ಸುತ್ತಿನಲ್ಲಿ ಕಾಂಗ್ರೆಸ್‌ನ ಎಸ್‌.ಟಿ. ಸೋಮಶೇಖರ್‌ ಮುನ್ನಡೆ ಪಡೆದರು. ಉಸ್ಸಪ್ಪಾ ಎಂದು ಗೆಲುವಿನ ನಗೆ ಬೀರಿದರು.

ಆನೇಕಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಶಿವಣ್ಣ ಹಾಗೂ ಬಿಜೆಪಿಯ ಎ.ನಾರಾಯಣಸ್ವಾಮಿ ಅವರ ನಡುವೆ ಪ್ರತಿ ಸುತ್ತಿನಲ್ಲೂ ಭಾರಿ ಪೈಪೋಟಿ ಏರ್ಪಟ್ಟಿತ್ತು. ಒಂದು ಸುತ್ತಿನಲ್ಲಿ ಶಿವಣ್ಣ ಮುನ್ನಡೆ ಸಾಧಿಸಿದರೆ, ಮತ್ತೊಂದು ಸುತ್ತಿನಲ್ಲಿ ನಾರಾಯಣಸ್ವಾಮಿ ಮುಂದೆ ಸಾಗುತ್ತಿದ್ದರು. ಕೊನೆಯ ನಾಲ್ಕು ಸುತ್ತುಗಳಲ್ಲಿ ಶಿವಣ್ಣ ಮುನ್ನಡೆ ಕಾಯ್ದುಕೊಂಡು ಗೆಲುವಿನ ನಗೆ ಬೀರಿದರು.
*
ಯಾರಿಗೆ ಎಷ್ಟು ಸ್ಥಾನ

ಬಿಜೆಪಿ–3
ಕಾಂಗ್ರೆಸ್‌–3
ಜೆಡಿಎಸ್‌–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.