ADVERTISEMENT

ನಾಗರಿಕರ ಪಾಲ್ಗೊಳ್ಳುವಿಕೆ ಉತ್ತೇಜನಕ್ಕೆ ಸಲಹೆ

‘ಸಿಟಿಜನ್‌ಶಿಪ್‌ ಇಂಡೆಕ್ಸ್‌’ ವರದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:42 IST
Last Updated 16 ಡಿಸೆಂಬರ್ 2014, 19:42 IST
‘ಜನಾಗ್ರಹ’ ನಾಗರಿಕ ಮತ್ತು ಪ್ರಜಾಪ್ರಭುತ್ವ ಕೇಂದ್ರ  ಹಾಗೂ ‘ಬ್ರೌನ್‌ ಇಂಡಿಯಾ ಇನ್ಷಿಯೇಟಿವ್‌’ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಿಟಿಜನ್‌ಶಿಪ್‌ ಇಂಡೆಕ್ಸ್‌’ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರೌನ್‌ ಯೂನಿವರ್ಸಿಟಿಯ ಪ್ರೊ. ಪ್ಯಾಟ್ರಿಕ್‌ ಹೆಲ್ಲರ್‌ ಮಾತನಾಡಿದರು. ಜನಾಗ್ರಹ ಸಂಸ್ಥೆಯ ಸಂಶೋಧನಾ ಕೇಂದ್ರದ ವ್ಯವಸ್ಥಾಪಕಿ ಕ್ಯಾಟಿ ಪೈಲ್‌, ಅಜೀಂ ಪ್ರೇಮ್‌ಜಿ ವಿ.ವಿಯ ಪ್ರೊ. ಸಿದ್ದಾರ್ಥ ಸ್ವಾಮಿನಾಥನ್‌ ಚಿತ್ರದಲ್ಲಿದ್ದಾರೆ	– ಪ್ರಜಾವಾಣಿ ಚಿತ್ರ
‘ಜನಾಗ್ರಹ’ ನಾಗರಿಕ ಮತ್ತು ಪ್ರಜಾಪ್ರಭುತ್ವ ಕೇಂದ್ರ ಹಾಗೂ ‘ಬ್ರೌನ್‌ ಇಂಡಿಯಾ ಇನ್ಷಿಯೇಟಿವ್‌’ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಿಟಿಜನ್‌ಶಿಪ್‌ ಇಂಡೆಕ್ಸ್‌’ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರೌನ್‌ ಯೂನಿವರ್ಸಿಟಿಯ ಪ್ರೊ. ಪ್ಯಾಟ್ರಿಕ್‌ ಹೆಲ್ಲರ್‌ ಮಾತನಾಡಿದರು. ಜನಾಗ್ರಹ ಸಂಸ್ಥೆಯ ಸಂಶೋಧನಾ ಕೇಂದ್ರದ ವ್ಯವಸ್ಥಾಪಕಿ ಕ್ಯಾಟಿ ಪೈಲ್‌, ಅಜೀಂ ಪ್ರೇಮ್‌ಜಿ ವಿ.ವಿಯ ಪ್ರೊ. ಸಿದ್ದಾರ್ಥ ಸ್ವಾಮಿನಾಥನ್‌ ಚಿತ್ರದಲ್ಲಿದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು:  ‘ಜನಾಗ್ರಹ’ ನಾಗರಿಕ ಮತ್ತು ಪ್ರಜಾಪ್ರಭುತ್ವ ಕೇಂದ್ರ  ಹಾಗೂ ‘ಬ್ರೌನ್‌ ಇಂಡಿಯಾ ಇನ್ಷಿಯೇಟಿವ್‌’ ನಗರದಲ್ಲಿ ಮಂಗಳ­ವಾರ ‘ಸಿಟಿಜನ್‌ಶಿಪ್‌ ಇಂಡೆಕ್ಸ್‌’ ವರದಿಯನ್ನು ಬಿಡುಗಡೆ ಮಾಡಿತು.

ಬೆಂಗಳೂರಿನಲ್ಲಿ ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸಲು ಹಾಗೂ ನಾಗರಿಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕಡಿಮೆ ಆಸಕ್ತಿಯನ್ನು ತಳೆದಿದ್ದಾರೆ ಎಂದು ವರದಿ ಹೇಳಿದೆ. ಚುನಾವಣೆ ವೇಳೆಯಲ್ಲಿ ಮತ ಚಲಾಯಿಸುವುದನ್ನು ಬಿಟ್ಟು, ಇನ್ನಿತರ ಯಾವುದೇ ರಾಜಕೀಯ ವಿಷಯದಲ್ಲಿಯೂ ಬೆಂಗಳೂರಿಗರು ಹೆಚ್ಚು ಪಾಲ್ಗೊಳ್ಳುವುದಿಲ್ಲ. ಹೀಗಾಗಿ, ಸರ್ಕಾರವು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕೆಂದು ವರದಿಯಲ್ಲಿ ಸಲಹೆ ಮಾಡಲಾಗಿದೆ. 

‘ಜನಾಗ್ರಹ’ ನಾಗರಿಕ ಮತ್ತು ಪ್ರಜಾಪ್ರಭುತ್ವ ಕೇಂದ್ರದ ಉಪಾಧ್ಯಕ್ಷ ರಮೇಶ್ ರಾಮನಾಥನ್‌, ‘ಬೆಂಗಳೂರಿನ 4,000 ಕ್ಕಿಂತ ಹೆಚ್ಚು ನಾಗರಿಕರ ಸಮೀಕ್ಷೆ ನಡೆಸಲಾಗಿದೆ. ಅವರಲ್ಲಿ ಬಡವರು ಮತ್ತು ಬಡವರಲ್ಲದವರು, ಮುಸಲ್ಮಾನರು ಮತ್ತು ಮುಸಲ್ಮಾನರಲ್ಲದವರು, ಶಿಕ್ಷಿತರು ಹಾಗೂ ಅಶಿಕ್ಷಿತರನ್ನು ಸಮೀಕ್ಷೆ ನಡೆಸಲಾಗಿದೆ’ ಎಂದರು.

‘ಅವರಲ್ಲಿ ಮುಕ್ಕಾಲು ಭಾಗ 18 ವರ್ಷ ವಯೋಮಾನದ ನಾಗರಿಕರು ರಾಷ್ಟ್ರೀಯ, ರಾಜ್ಯ ಮತ್ತು ಮುನ್ಸಿಪಲ್‌ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಹತ್ತರಲ್ಲಿ ಒಂದು ಭಾಗ­ದಷ್ಟು ನಾಗರಿಕರು ಮಾತ್ರ ಚುನಾವಣೆ ಹೊರತಾಗಿ ರಾಜಕೀಯವಾಗಿ ಸಕ್ರಿಯರಾ­ಗಿ­ದ್ದಾರೆ’ ಎಂದು ಹೇಳಿದರು.

‘ಔಪಚಾರಿಕ ನಾಗರಿಕತ್ವವು ಎಲ್ಲರಿಗೂ ಸಾಮಾನ್ಯವಾಗಿ ದೊರೆತಿದೆ. ಪರಿಣಾಮಕಾರಿ­ಯಾದ ನಾಗರಿಕತ್ವವು ಎಲ್ಲರಿಗೂ ಸಮಾನವಾಗಿ ದೊರೆತಿಲ್ಲ. ಶಿಕ್ಷಣ, ಸಾಮಾಜಿಕ ನ್ಯಾಯವು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಬಡವರಲ್ಲ­ದವ­ರಿಗಿಂತ ಬಡವರಿಗೆ ಕೆಳಗಿನ ಮಟ್ಟದ ನಾಗರಿಕತ್ವ ದೊರೆತಿದೆ’ ಎಂದರು.

‘ನಾಗರಿಕರು ಸಾಮಾಜಿಕ ಅಥವಾ ರಾಜಕೀಯ ವಿಷಯಗಳಲ್ಲಿ ಹೆಚ್ಚು ಭಾಗವಹಿ­ಸುವುದರಿಂದ, ಅವರ ಜೀವನಮಟ್ಟ ಸುಧಾರಿಸು­ತ್ತದೆ ಹಾಗೂ ಮೂಲ ಸೌಕರ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಪಡೆಯಬಹುದಾಗಿದೆ’ ಎಂದರು.

‘ನಾಗರಿಕರು ತಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸೌಕರ್ಯಗಳನ್ನು ಪಡೆಯಲು ಸರ್ಕಾರದ ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಳ್ಳ­ಬೇಕಾಗಿದೆ. ಅಲ್ಲದೇ, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಮತ್ತಿತರ ಸರ್ಕಾರಿ ಸಂಸ್ಥೆಗಳು ನಾಗರಿಕ­ರಿಗೆ ಮೂಲ ಸೌಕರ್ಯವನ್ನು ಉತ್ತಮ ಮಟ್ಟ­ದಲ್ಲಿ ಒದಗಿಸಬೇಕಾಗಿದೆ’ ಎಂದು ಹೇಳಿದರು.

ಬ್ರೌನ್‌ ಯೂನಿವರ್ಸಿಟಿ ನಿರ್ದೇಶಕ ಡಾ.ಅಶುತೋಷ್‌ ವಾರ್ಷನಿ, ‘ನಾಗರಿಕರು ರಾಜಕೀಯವಾಗಿ ಮತ್ತು ನಾಗರಿಕ ಚಟುವಟಿಕೆ­ಗಳಲ್ಲಿ ಪಾಲ್ಗೊಳ್ಳಬೇಕಾದುದು ಅಗತ್ಯವಾಗಿದೆ. ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸಲು ಮತ್ತು ಕರ್ತವ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದಾದರೆ, ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.