ADVERTISEMENT

ನಾಡಿಗೆ ಬಂದ ಗಜಪಡೆ: ರಾತ್ರಿ ದಾಂದಲೆ

ಜಿಗಣಿ ಬಳಿ ನೀಲಗಿರಿ ತೋಪಿನಲ್ಲಿ ಠಿಕಾಣಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:27 IST
Last Updated 6 ಡಿಸೆಂಬರ್ 2012, 9:27 IST
ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಕೃಷ್ಣದೊಡ್ಡಿಯ ನೀಲಗಿರಿ ತೋಪಿನಲ್ಲಿ ವಾಸ್ತವ್ಯ ಹೂಡಿದ್ದ ಕಾಡಾನೆಗಳ ಹಿಂಡು.
ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಕೃಷ್ಣದೊಡ್ಡಿಯ ನೀಲಗಿರಿ ತೋಪಿನಲ್ಲಿ ವಾಸ್ತವ್ಯ ಹೂಡಿದ್ದ ಕಾಡಾನೆಗಳ ಹಿಂಡು.   

ಆನೇಕಲ್: ಆಹಾರ ಹುಡುಕಿಕೊಂಡು ಬಂದ ಕಾಡಾನೆಗಳ ಹಿಂಡು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೂ ತಾಲ್ಲೂಕಿನ ಜಿಗಣಿ ಸಮೀಪದ ಕೃಷ್ಣದೊಡ್ಡಿ ಗ್ರಾಮದ ನೀಲಗಿರಿ ತೋಪಿನಲ್ಲಿ ವಾಸ್ತವ್ಯ ಹೂಡಿದ್ದವು. ಇದರಿಂದ ಸಮೀಪದ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.

ಒಂಬತ್ತು ಹೆಣ್ಣಾನೆ, ಮೂರು ಸಲಗ ಹಾಗೂ ಐದು ಮರಿಯಾನೆಗಳು ಸೇರಿದಂತೆ ಒಟ್ಟು 17 ಆನೆಗಳ ಹಿಂಡು ಮಂಗಳವಾರ ರಾತ್ರಿ ಬನ್ನೇರುಘಟ್ಟ ಅರಣ್ಯದಿಂದ ಹೊರಬಂದು ದಾಂಧಲೆ ನಡೆಸಿದವು. ಮಹಾಂತ ಲಿಂಗಾಪುರ, ಕೃಷ್ಣದೊಡ್ಡಿ ಗ್ರಾಮಗಳಲ್ಲಿ ರಾಗಿ ಮತ್ತು ಭತ್ತದ ಬೆಳೆಗಳನ್ನು ನಾಶಪಡಿಸಿದವು. ಬೆಳಿಗ್ಗೆಯವರೆಗೂ ಇವು ರಾಗಿ ಹೊಲಗಳಲ್ಲಿ ಠಿಕಾಣಿ ಹೂಡಿ ಬೆಳೆಗಳನ್ನು ತಿನ್ನುವುದರಲ್ಲಿ ಮತ್ತು ತುಳಿದು ನಾಶಪಡಿಸುವಲ್ಲಿ ನಿರತವಾಗಿದ್ದವು.

ನೀಲಗಿರಿ ತೋಪಿನಲ್ಲಿ ಆನೆಗಳಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಬುಧವಾರ ಬೆಳ್ಳಂಬೆಳಿಗ್ಗೆಯೇ ತೋಪಿನ ಸುತ್ತಲೂ ಜಮಾಯಿಸಿದರು. ಜನರನ್ನು ಕಂಡ ಆನೆಗಳ ಹಿಂಡು ಕೃಷ್ಣದೊಡ್ಡಿಯ ನೀಲಗಿರಿ ತೋಪಿನ್ಲ್ಲಲೇ ಒತ್ತಟ್ಟಿಗೆ ಸೇರಿಕೊಂಡವು. ಜನರು ಗಲಾಟೆ ಮಾಡುತ್ತಿದ್ದಂತೆ ತೋಪಿನಿಂದ ಆಗಾಗ್ಗೆ ಹೊರಬರುತ್ತಿದ್ದ ಸಲಗಗಳು ಜನರತ್ತ ದಾಳಿ ಮಾಡಲು ಮುಂದಾಗುತ್ತಿದ್ದವು. ಆನೆಗಳು ಹೊರ ಬರುತ್ತಿದ್ದಂತೆ ಜನರು ದೂರಕ್ಕೆ ಓಡುತ್ತಿದ್ದರು. ಮತ್ತೆ ತೋಪಿನತ್ತ ಜಮಾಯಿಸುತ್ತಿದ್ದರು. ಕಡೆಗೆ ಸಾರ್ವಜನಿಕರ ನೆರವಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿಗಳನ್ನು ಸಿಡಿಸಿ ಬೆಳಿಗ್ಗೆ 9.30ರ ವೇಳೆಗೆ ಎಲ್ಲ ಆನೆಗಳನ್ನೂ ನೀಲಗಿರಿ ತೋಪಿನಿಂದ ತೆರವುಗೊಳಿಸಿದರು. ಕಸವನಕುಂಟೆ ಮಾರ್ಗವಾಗಿ ಬನ್ನೇರುಘಟ್ಟ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.

`ಕಾಡಿನಲ್ಲಿರುವ ಆನೆಗಳು ರಾಗಿ ಮತ್ತು ಭತ್ತವನ್ನು ಮೇಯುವ ಸಲುವಾಗಿ ಪ್ರತಿವರ್ಷ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಗ್ರಾಮಗಳತ್ತ ಬರುವುದು ಸಾಮಾನ್ಯ. ಆನೆಕಂದಕ ಹಾಗೂ ತಡೆಗೋಡೆಗಳನ್ನು ನಿರ್ಮಿಸಿದ್ದರೂ ಆನೆಗಳ ಹಿಂಡು ಬನ್ನೇರುಘಟ್ಟ ಸುತ್ತಮುತ್ತಲಿನ ಗ್ರಾಮಗಳಾದ ಮಂಟಪ, ಮೆಳೆನಲ್ಲಸಂದ್ರ, ಬೇಗೆಹಳ್ಳಿ ಮತ್ತು ಕಾಳೇಶ್ವರಿ ಗ್ರಾಮಗಳಿಗೆ ದಾಳಿ ಇಡುವುದು ವಾಡಿಕೆಯಾಗಿದೆ' ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.