ADVERTISEMENT

ನಾಲ್ಕು ವರ್ಷ ಅಧ್ಯಯನ- ಒಂದು ವರ್ಷ ತರಬೇತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:55 IST
Last Updated 6 ಜೂನ್ 2011, 19:55 IST

ಬೆಂಗಳೂರು: `ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ನೀಡುವ ನಿಟ್ಟಿನಲ್ಲಿ ಈಗಿರುವ ಐದು ವರ್ಷಗಳ ದಂತ ವೈದ್ಯಕೀಯ ಪದವಿ ಕೋರ್ಸ್ (ಬಿಡಿಎಸ್) ಬದಲಿಗೆ ನಾಲ್ಕು ವರ್ಷ ಅಧ್ಯಯನ, ಒಂದು ವರ್ಷ ಇಂಟರ್ನ್‌ಷಿಪ್‌ಗೆ ಅವಕಾಶ ಕಲ್ಪಿಸಬೇಕು~ ಎಂದು ರಾಜೀವ್‌ಗಾಂಧಿ ದಂತ ವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್.ರಮಾನಂದಶೆಟ್ಟಿ ಒತ್ತಾಯಿಸಿದರು.

ವಿವಿ ಹಾಗೂ ಭಾರತೀಯ ದಂತ ವೈದ್ಯಕೀಯ ಮಂಡಳಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `2008ರ ಬಿಡಿಎಸ್ ನಿಯಮಾವಳಿಗಳ ಪುನರ್ ರಚನೆ~ ಕುರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪ್ರಸ್ತುತ ಐದು ವರ್ಷಗಳ ಪೂರ್ಣ ಅವಧಿಗೆ ವಿದ್ಯಾರ್ಥಿಗಳು ಬಿಡಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ದೊರೆಯುವುದಿಲ್ಲ. ಇಂಟರ್ನ್‌ಷಿಪ್ ಮಾಡದೇ ಕೋರ್ಸ್ ಮುಗಿಸಬೇಕಾದ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ವೃತ್ತಿ ಆರಂಭಿಸುವವರಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಈ ನ್ಯೂನತೆಗಳನ್ನು ಸರಿಪಡಿಸಲು ಮೊದಲು ಇದ್ದ ನಾಲ್ಕು ವರ್ಷ ಅಧ್ಯಯನ ಒಂದು ವರ್ಷ ಇಂಟರ್ನ್‌ಷಿಪ್ ತರಬೇತಿಯನ್ನು ಸರ್ಕಾರ ಮತ್ತೆ ಜಾರಿಗೆ ತರಬೇಕು~ ಎಂದು ಅವರು ಹೇಳಿದರು.

ಭಾರತೀಯ ದಂತ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ದಿಬ್ಯೇಂದು ಮಜೂಂದಾರ್ ಮಾತನಾಡಿ `ನಾಲ್ಕು ಪ್ಲಸ್ ಒಂದು ಮಾದರಿಯ ಕೋರ್ಸ್ ಅಗತ್ಯದ ಕುರಿತು ದೇಶದಾದ್ಯಂತ ಸಹಿ ಸಂಗ್ರಹ ಆಂದೋಲನ ನಡೆಸಿದಾಗ ಶೇ 99ರಷ್ಟು ಪ್ರತಿಕ್ರಿಯೆಗಳು ಕೋರ್ಸ್ ಪರವಾಗಿ ಬಂದಿವೆ. ಮಂಡಳಿಯ 63 ಸದಸ್ಯರಲ್ಲಿ 62 ಮಂದಿ ಹಳೆಯ ಕೋರ್ಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಳೆಯ ವ್ಯವಸ್ಥೆಗೆ ಸರ್ಕಾರ ಮರಳಬೇಕು~ ಎಂದರು.  ಮಂಡಳಿಯ ಉಪಾಧ್ಯಕ್ಷ ಡಾ. ಮಹೇಶ್ ವರ್ಮಾ, ಕಾರ್ಯದರ್ಶಿ ಡಾ. ಎಸ್.ಕೆ. ಓಝಾ, ವಿವಿ ರಿಜಿಸ್ಟ್ರಾರ್ ಡಾ. ಡಿ.ಪ್ರೇಮಕುಮಾರ್, ದಂತ ವೈದ್ಯಕೀಯ ವಿಭಾಗದ ಡೀನ್ ಡಾ. ಕೆ.ಎಸ್.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.