ADVERTISEMENT

ನಾಳೆಯಿಂದ ಅರಮನೆ ಮೈದಾನದಲ್ಲಿ ಮತ್ಸ್ಯಮೇಳ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:45 IST
Last Updated 16 ಫೆಬ್ರುವರಿ 2011, 19:45 IST

ಬೆಂಗಳೂರು: ಸಮುದ್ರ ಮತ್ತು ಸಿಹಿ ನೀರಿನ ತರಹೇವಾರಿ ಮೀನು ತಳಿಗಳು, ಕಣ್ಮನ ಸೆಳೆಯುವ ಅಲಂಕಾರಿಕ ಮೀನುಗಳು, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ಮೀನು ಖಾದ್ಯ, ಮೀನುಗಾರಿಕೆ ಕುರಿತ ಸಂಶೋಧನೆ, ತಂತ್ರಜ್ಞಾನಗಳ ಪ್ರದರ್ಶನ....

- ಇವು ಮೀನುಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಎಫ್‌ಡಿಬಿ) ಜಂಟಿಯಾಗಿ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಫೆಬ್ರುವರಿ 18ರಿಂದ 21ರವರೆಗೆ ಆಯೋಜಿಸಿರುವ ‘ಮತ್ಸ್ಯಮೇಳ-2011’ರ ಪ್ರಮುಖ ವಿಶೇಷಗಳು.

ಶುಕ್ರವಾರ ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಳಕ್ಕೆ ಚಾಲನೆ ನೀಡುವರು. ಮೀನುಗಾರಿಕಾ ಸಚಿವ ಜೆ.ಕೃಷ್ಣ ಪಾಲೇಮಾರ್ ಅಲಂಕಾರಿಕ ಮೀನುಗಳ ಪ್ರದರ್ಶನ ಉದ್ಘಾಟಿಸುವರು.

ರಾಜ್ಯದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೀನುಗಾರಿಕೆ ಇಲಾಖೆ ಮೊತ್ತಮೊದಲ ಬಾರಿಗೆ ಮತ್ಸ್ಯಮೇಳ ಆಯೋಜಿಸುತ್ತಿದೆ.ಮೀನುಗಾರಿಕೆಗೆ ಉದ್ಯಮದ ಸ್ಪರ್ಶ ನೀಡುವುದು ಈ ಮೇಳದ ಪ್ರಮುಖ ಗುರಿ.ಒಳನಾಡು ಮೀನು ಸಾಕಣೆ ಮತ್ತು ಉಪ್ಪು ನೀರಿನ ಮೀನುಗಾರಿಕೆ ಕುರಿತು ಎಲ್ಲ ವಿವರವನ್ನು ಜನಸಾಮಾನ್ಯರಿಗೆ ತಲುಪಿಸುವ ಆಶಯವನ್ನೂ ಈ ಮೇಳ ಹೊಂದಿದೆ.

ಈ ಮೇಳಕ್ಕಾಗಿ ತ್ರಿಪುರವಾಸಿನಿಯಲ್ಲಿ ಸುಸಜ್ಜಿತವಾದ ವಸ್ತುಪ್ರದರ್ಶನ ವೇದಿಕೆ ಸಿದ್ಧವಾಗುತ್ತಿದೆ.ಅಲ್ಲಿನ 125 ಮಳಿಗೆಗಳಲ್ಲಿ ಮೀನು ತಳಿಗಳು, ಅಲಂಕಾರಿಕ ಮೀನುಗಳು ಮತ್ತು ಅಕ್ವೇರಿಯಂ, ಮೀನುಗಾರಿಕೆಗೆ ಸಂಬಂಧಿಸಿದ ತಂತ್ರಜ್ಞಾನ, ಯಂತ್ರೋಪಕರಣ, ಸಂಶೋಧನೆಯ ಮಾಹಿತಿಯ ಪ್ರದರ್ಶನ ನಡೆಯಲಿದೆ. ಮೀನು ತಳಿಗಳು ಮತ್ತು ಅಲಂಕಾರಿಕ ಮೀನುಗಳ ಮಾರಾಟವೂ ನಡೆಯಲಿದೆ.

ಬುಧವಾರ ತ್ರಿಪುರವಾಸಿನಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀನುಗಾರಿಕೆ ಇಲಾಖೆ ನಿರ್ದೇಶಕ ಎಚ್.ಎಸ್.ವೀರಪ್ಪಗೌಡ ಮತ್ತು ಮೇಳದ ಸಂಘಟಕರೂ ಆಗಿರುವ ಇಲಾಖೆಯ ಜಂಟಿ ನಿರ್ದೇಶಕ ಡಾ.ಎನ್.ಆರ್.ರಾಮಕೃಷ್ಣ, ‘ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಎಲ್ಲ ಪಾಲುದಾರರನ್ನೂ ಒಂದೆಡೆ ಸೇರಿಸುವುದು ನಮ್ಮ ಗುರಿ’ ಎಂದರು.

‘ಮೀನುಗಾರರು, ಮೀನುಗಾರಿಕೆ ಉದ್ಯಮಿಗಳು, ಸಂಶೋಧಕರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಾಂತ್ರಿಕ ತಜ್ಞರು ಮತ್ತು ಸಾಮಾನ್ಯ ಜನರು ಒಂದೆಡೆ ಸೇರಿ ಮೀನುಗಾರಿಕೆ ಕುರಿತು ವಿಚಾರ ವಿನಿಮಯ ನಡೆಸಲು ಈ ಮೇಳ ವೇದಿಕೆಯಾಗಲಿದೆ. ದಕ್ಷಿಣದ ನಾಲ್ಕು ರಾಜ್ಯಗಳ ಮೀನುಗಾರಿಕೆ ಕ್ಷೇತ್ರದ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ವಿವರ ನೀಡಿದರು.

ರೂ 50 ಲಕ್ಷ ವೆಚ್ಚ: ಮೇಳದ ಸಿದ್ಧತೆಗೆ 50 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.ರಾಜ್ಯ ಸರ್ಕಾರ ಮತ್ತು ಎನ್‌ಎಫ್‌ಡಿಬಿ ತಲಾ 25 ಲಕ್ಷ ರೂಪಾಯಿ ನೀಡಿವೆ. ರಿಯಾಯಿತಿ ದರದಲ್ಲಿ ಮಳಿಗೆಗಳನ್ನು ನೀಡಲಾಗುತ್ತಿದೆ ಎಂದರು.

ಖಾಸಗಿಯವರಿಗೆ ಮಳಿಗೆಯೊಂದಕ್ಕೆ ನಾಲ್ಕೂ ದಿನಗಳಿಗೆ ಒಟ್ಟು ರೂ 9,000 ದರ ನಿಗದಿ ಮಾಡಲಾಗಿದೆ.ಸ್ವಸಹಾಯ ಗುಂಪುಗಳಿಗೆ ರೂ 3,000 ಮಾತ್ರ ಶುಲ್ಕ ಪಡೆಯಲಾಗುತ್ತಿದೆ. ಮೀನುಗಾರಿಕೆ ಇಲಾಖೆ ಐದು ದಶಕಗಳ ಅವಧಿಯಲ್ಲಿ ರಾಜ್ಯದ ಮೀನುಗಾರಿಕೆ ಸಾಗಿ ಬಂದ ಹಾದಿಯ ಮಾಹಿತಿಯನ್ನು ಪ್ರದರ್ಶಿಸಲಿದೆ ಎಂದು ತಿಳಿಸಿದರು.

ಖಾದ್ಯಕ್ಕೆ 20 ಮಳಿಗೆ: ಮೀನಿನ ಖಾದ್ಯಗಳ ಮಾರಾಟ ಮೇಳದ ವಿಶೇಷಗಳಲ್ಲಿ ಒಂದು. ಅದಕ್ಕಾಗಿ 20 ಮಳಿಗೆಗಳನ್ನು ಮೀಸಲಿಡಲಾಗಿದೆ. ವಿವಿಧ ಬಗೆಯ ಮೀನಿನ ಖಾದ್ಯಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ.ಕಡಿಮೆ ದರದಲ್ಲಿ ಖಾದ್ಯಗಳನ್ನು ಪೂರೈಸುವಂತೆ ಮೇಳದಲ್ಲಿ ಭಾಗವಹಿಸುತ್ತಿರುವ ಖಾದ್ಯ ತಯಾರಕರನ್ನು ಕೋರಲಾಗಿದೆ ಎಂದು ಹೇಳಿದರು.

ಮೇಳಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ.ಕನಿಷ್ಠ ಮೂರು ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ.ಮೀನುಗಾರಿಕೆ ವಲಯದಲ್ಲಿ ಹೂಡಿಕೆ ಕುರಿತ ಚರ್ಚೆಗೂ ಈ ಕಾರ್ಯಕ್ರಮ ನಾಂದಿ ಹಾಡಲಿದೆ ಎಂದರು.

ಕ್ಯಾಟ್‌ಫಿಶ್ ಸಾಕಾಣಿಕೆ ಸ್ಥಗಿತ
ನಗರದ ಬಾಗಲೂರು ಸುತ್ತಮುತ್ತಲಿನ 500 ಕೆರೆ ಮತ್ತು ಕೊಳಗಳಲ್ಲಿ ನಿಷೇಧಿತ ‘ಆಫ್ರಿಕನ್ ಕ್ಯಾಟ್‌ಫಿಷ್’ ಸಾಕಾಣಿಕೆ ನಡೆಯುತ್ತಿದ್ದು, ಅದನ್ನು ಸ್ಥಗಿತಗೊಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ಆರ್.ರಾಮಕೃಷ್ಣ ತಿಳಿಸಿದರು.

‘ಮತ್ಸ್ಯಮೇಳ-2011’ರ ಹಿನ್ನೆಲೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಬಾಗಲೂರು, ರಜಾಕ್‌ಪಾಳ್ಯ, ಬಾಬುಸಾಪಾಳ್ಯ, ಸುಲ್ತಾನ್‌ಪಾಳ್ಯದ 500ಕ್ಕೂ ಹೆಚ್ಚು ಕೆರೆ ಮತ್ತು ಕೊಳಗಳಲ್ಲಿ ನಿಷೇಧಿತ ಮೀನು ಸಾಕುತ್ತಿರುವ ವಿಷಯ ತಿಳಿದು ಬಂದಿದೆ ಎಂದರು.

‘ಆಫ್ರಿಕನ್ ಕ್ಯಾಟ್ ಫಿಷ್ ನಮ್ಮ ಪರಿಸರಕ್ಕೆ ವಿರುದ್ಧವಾದ ಗುಣಗಳನ್ನು ಹೊಂದಿರುವ ಮೀನು. ಅದು ನೈಸರ್ಗಿಕ ನೀರಿನ ತಾಣಗಳನ್ನು ಸೇರಿದರೆ ಅಲ್ಲಿನ ಎಲ್ಲ ಮೀನು ತಳಿಗಳನ್ನೂ ತಿಂದು ಹಾಕುತ್ತದೆ. ಪರಿಣಾಮದೇಸಿ ತಳಿಯ ಮೀನುಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಆದ್ದರಿಂದ ಈ ತಳಿಯ ಮೀನು ಸಾಕಣೆಯನ್ನು ನಿಷೇಧಿಸಲಾಗಿದೆ’ ಎಂದು ವಿವರಿಸಿದರು.

‘ಆಫ್ರಿಕನ್ ಕ್ಯಾಟ್ ಫಿಷ್’ ಸಾಕಾಣಿಕೆ ಮಾಡುವವರ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 133ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.ಈ ಸಂಬಂಧ ನಗರ ಜಿಲ್ಲಾಧಿಕಾರಿ ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರೆ ಎಂದರು.

‘ಹೊರ ರಾಜ್ಯಗಳಲ್ಲಿ ಈ ತಳಿಯ ಮೀನು ಮರಿಗಳನ್ನು ಉತ್ಪಾದಿಸಲಾಗುತ್ತಿದೆ.ಆದ್ದರಿಂದ ಮರಿಗಳ ಉತ್ಪಾದನೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.ಮೀನುಗಾರಿಕೆಗೆ ಸಂಬಂಧಿಸಿದಂತೆ ಸದ್ಯ ಜಾರಿಯಲ್ಲಿರುವ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅಸಾಧ್ಯ.ಈ ಹಿನ್ನೆಲೆಯಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

ಆಕ್ವಾ ಪಾರ್ಕ್: ಅಲಂಕಾರಿಕ ಮೀನುಗಳ ಸಾಕಾಣಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹೆಸರುಘಟ್ಟದ ಬಳಿ ಆರು ಎಕರೆ ವಿಸ್ತೀರ್ಣದ ‘ಆಕ್ವಾ ಪಾರ್ಕ್’ ನಿರ್ಮಿಸಲಾಗುತ್ತಿದ್ದು, 2012ರ ಅಂತ್ಯದ ವೇಳೆಗೆ ಪಾರ್ಕ್ ಸಿದ್ಧವಾಗಲಿದೆ ಎಂದು ತಿಳಿಸಿದರು.

‘ತಲಾ ಅರ್ಧ ಎಕರೆಯಲ್ಲಿ 12 ಸಂಸ್ಥೆಗಳಿಗೆ ಅಲಂಕಾರಿಕ ಮೀನುಗಳ ಸಾಕಣೆ ಮತ್ತು ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪಾರ್ಕ್ ನಿರ್ಮಿಸಲಾಗುತ್ತಿದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.