ADVERTISEMENT

ನಿಗದಿತ ವೇಳೆಗೆ ಕಾವೇರಿ ಯೋಜನೆ ಪೂರ್ಣ: ಆದೇಶ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ಯೋಜನೆ ನಿಗದಿತ ಅವಧಿಗೆ ಪೂರ್ಣಗೊಂಡು ಮಾರ್ಚ್ ವೇಳೆಗೆ ನಗರದ ಜನರಿಗೆ ನೀರು ಪೂರೈಕೆಯಾಗಬೇಕು~ ಎಂದು ಬೆಂಗಳೂರು ಜಲಮಂಡಲಿ ಸಚಿವಎಸ್.ಸುರೇಶ್ ಕುಮಾರ್ ಕಠಿಣ ಸೂಚನೆ ನೀಡಿದರು.

ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನೆಗಾಗಿ ತಾತಗುಣಿ, ಹಾರೋಹಳ್ಳಿ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಗೆ ಸೋಮವಾರ ಭೇಟಿ ನೀಡಿದ ಅವರು ನಂತರ ನಡೆದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆಯಲ್ಲಿ ಈ ವಿಷಯ ತಿಳಿಸಿದರು.

`ಅಧಿಕಾರಿಗಳು ಯಾವುದೇ ಕಾರಣ ನೀಡಿ ಯೋಜನೆಯನ್ನು ಮುಂದೂಡುವಂತಿಲ್ಲ. ನಿಗದಿತ ವೇಳೆಯಲ್ಲಿ ನೀರು ಕೊಡುವುದಾಗಿ ಜನತೆಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸಬೇಕಿದೆ. ಕನಿಷ್ಠ 2012ರ ಫೆಬ್ರುವರಿ ವೇಳೆಗೆ ಯೋಜನೆ ಪ್ರಾಯೋಗಿಕವಾಗಿ ಅಸ್ತಿತ್ವಕ್ಕೆ ಬರಬೇಕು. ಬೇಸಿಗೆ ವೇಳೆಗೆ ಜನರಿಗೆ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು~ ಎಂದು ಹೇಳಿದರು.

`ಕಾರ್ಮಿಕರ ಕೊರತೆ ಬಹುತೇಕ ಕಡಿಮೆ ಆಗಿದೆ. ಆದರೂ ಇನ್ನೂ ಅಗತ್ಯವಿರುವ ಕಾರ್ಮಿಕರ ಪೂರೈಕೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಕೆಲ ಗುತ್ತಿಗೆದಾರರು ಕಾರ್ಮಿಕರನ್ನು ಒದಗಿಸಲು ಮುಂದೆ ಬಂದಿದ್ದು ವೇತನ ನಿಗದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಣಯ ಕೈಗೊಳ್ಳಬೇಕಿದೆ~ ಎಂದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಕೊಳವೆ ಅಳವಡಿಕೆ ಕಾಮಗಾರಿ ಶೇ 75ರಷ್ಟು, ಪಂಪಿಂಗ್ ಕೇಂದ್ರದ ಕಾಮಗಾರಿ ಶೇ 50ರಷ್ಟು ಹಾಗೂ ಶುದ್ಧೀಕರಣ ಘಟಕದ ಕಾಮಗಾರಿ ಶೇ 55ರಷ್ಟು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು.

ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ, ಕಾವೇರಿ ಯೋಜನೆ ಮುಖ್ಯ ಎಂಜಿನಿಯರ್ ನಾರಾಯಣ, ಗುತ್ತಿಗೆ ಕಂಪೆನಿಗಳ ಪ್ರತಿನಿಧಿಗಳು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.