ಬೆಂಗಳೂರು: `ಪರಿಸರದ ಒಂದು ಭಾಗಕ್ಕೆ ಹಾನಿ ಮಾಡಿದರೆ ಅದರ ದುಷ್ಪರಿಣಾಮವನ್ನು ಮತ್ತೊಂದು ರೀತಿಯಲ್ಲಿ ಎದುರಿಸಬೇಕಾಗುತ್ತದೆ. ವಿಜ್ಞಾನವು ಸಮಾಜವನ್ನು ನಾಶ ಮಾಡುವ ಹಂತ ತಲುಪಿರುವ ಪ್ರಸ್ತುತ ಸಂದರ್ಭದಲ್ಲಿ ನಿಸರ್ಗದ ಜತೆ ಸಮತೋಲನ ಸಾಧಿಸುವಂತಹ ವಿಜ್ಞಾನಕ್ಕೆ ಒತ್ತು ನೀಡಬೇಕಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ತಿಳಿಸಿದರು.
ಬೆಂಗಳೂರು ವೈಜ್ಞಾನಿಕ ಶಿಕ್ಷಣ ಸಂಸ್ಥೆ (ಬೇಸ್) ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಚಂದ್ರ ಒಂದು ವೈಜ್ಞಾನಿಕ ಚಿತ್ರಣ~ ನೆಹರು ತಾರಾಲಯದ ಹೊಸ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ವಿಜ್ಞಾನ ಮೂಲಭೂತ ಸಮಸ್ಯೆಗಳನ್ನು ಸೃಷ್ಟಿಸಿದೆ. ಹೊಸ ಆವಿಷ್ಕಾರಗಳಿಂದಾಗಿ ಓಜೋನ್ ಪದರ ಹಾಳಾಗುತ್ತಿದೆ. ಹವಾ ನಿಯಂತ್ರಣ ಮುಂತಾದ ಸಾಧನಗಳನ್ನು ಬಳಸುವುದರಿಂದ ಉಂಟಾಗುವ ಮಾರಕ ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ಹೊಸ ಆಯುಧಗಳನ್ನು ಕಂಡು ಹಿಡಿದ ಯೂರೋಪ್ ಅದರ ಕೆಟ್ಟ ಪ್ರತಿಫಲವನ್ನು ಅನುಭವಿಸುತ್ತಿದೆ. ವಿಜ್ಞಾನದ ಜತೆ ಆಧ್ಯಾತ್ಮವೂ ಬೆರೆತಾಗ ಮಾತ್ರ ಲೌಕಿಕ ಅಗತ್ಯಗಳು ಗೌಣವಾಗುತ್ತವೆ. ನಿಸರ್ಗದ ಜತೆ ಮಾನವ ಸಮಾಲೋಚಿಸಬೇಕಾದ ಅಗತ್ಯವಿದೆ~ ಎಂದರು.
`ಈಗಾಗಲೇ ಗಂಗಾ, ಯಮುನಾ ನದಿಗಳನ್ನು ಮಲಿನಗೊಳಿಸಲಾಗಿದೆ. ಒಂದೆಡೆ ಚಂದ್ರನೆಡೆಗೆ ದಾಪುಗಾಲಿಡುತ್ತಿರುವ ಭಾರತ ಮತ್ತೊಂದೆಡೆ ಮಾಲಿನ್ಯದಿಂದ ಅಧಃಪತನ ಕಾಣುತ್ತಿದೆ. ಎಲ್ಲದಕ್ಕೂ ಕೇವಲ ರಾಜಕಾರಣಿಗಳನ್ನು ಅಪಹಾಸ್ಯ ಮಾಡಿದರೆ ಪ್ರಯೋಜನವಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ನಾಗರಿಕ ಪ್ರಜ್ಞೆ ಎಲ್ಲರೊಳಗೆ ಜಾಗೃತವಾಗಬೇಕು. ಅಸಮರ್ಥ ರಾಜಕಾರಣಿಗಳನ್ನು ಮತದಾರರು ಚುನಾಯಿಸಲೇ ಬಾರದು~ ಎಂದರು.
`ರಾಜ್ಯದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿದ್ದ ಭ್ರಷ್ಟಾಚಾರ, ನಿಸರ್ಗದ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ನಾನು ದನಿ ಎತ್ತಿದ್ದೆ. ಆಗ ಆ ಬಗ್ಗೆ ಯಾರೂ ಮಾತನಾಡಲಿಲ್ಲ. ಕಡೆಗೂ ನಿಸರ್ಗದತ್ತವಾಗಿಯೇ ಭ್ರಷ್ಟರು ನಿರ್ಮೂಲನೆಯಾದರು~ ಎಂದು ಮಾರ್ಮಿಕವಾಗಿ ಹೇಳಿದರು.
`ವಿಜ್ಞಾನಿಗಳು ಸಮಾಜದಲ್ಲಿ ಬಹುಮುಖ ಪಾತ್ರವನ್ನು ಹೊಂದಿದ್ದಾರೆ. ವಿಜ್ಞಾನ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಅಣು ಶಕ್ತಿಯಿಂದಾಗುವ ಹಾನಿ ಬಗ್ಗೆಯೂ ವಿಜ್ಞಾನಿಗಳು ಗಮನ ಹರಿಸಬೇಕಿದೆ~ ಎಂದರು.
`ಬೇಸ್~ ಅಧ್ಯಕ್ಷ ಡಾ.ಯು.ವಿ.ರಾವ್, `ವಿಶ್ವವಿದ್ಯಾಲಯಗಳು ಗೆಲಾಕ್ಸಿಗಳ ಬಗ್ಗೆ ಬೋಧಿಸುವುದಕ್ಕಷ್ಟೇ ಸೀಮಿತವಾಗಿವೆ. ಖಗೋಳದ ಇನ್ನಿತರ ಅಂಶಗಳ ಬಗ್ಗೆ ಆಳವಾಗಿ ಅರಿಯುವ, ಅಧ್ಯಯನ ಮಾಡುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡಿಲ್ಲ. ಚಂದ್ರನ ಬಗ್ಗೆಯೂ ಇದೇ ಧೋರಣೆ ಅನುಸರಿಸಲಾಗಿದೆ.
ಇಂತಹ ಸಂದರ್ಭದಲ್ಲಿ ತಾರಾಲಯ ಚಂದ್ರನ ವಿಚಾರವನ್ನು ಜನಪ್ರಿಯಗೊಳಿಸುತ್ತಿರುವುದು ಸಂತಸದ ವಿಚಾರ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾರಾಲಯದ ನಿರ್ದೇಶಕ ಪ್ರೊ.ಸಿ.ಎಸ್.ಶುಕ್ರೆ, ವೈಜ್ಞಾನಿಕ ಅಧಿಕಾರಿ ಎಚ್.ಆರ್.ಮಧುಸೂದನ್ ಇದ್ದರು.
ತಕ್ಷಣ ಅಂಗೀಕಾರ- ರಾಜ್ಯಪಾಲ
ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ವಿ.ಬಾಲಸುಬ್ರಮಣಿಯನ್ ವರದಿ ಶಿಫಾರಸು ಮಾಡಿರುವ `2011ರ ಭೂಕಬಳಿಕೆ ನಿಯಂತ್ರಣ ಮಸೂದೆ~ ಜಾರಿಗೆ ಸರ್ಕಾರ ಸಮ್ಮತಿ ನೀಡಿದರೆ ಅದಕ್ಕೆ ತಕ್ಷಣ ಅಂಗೀಕಾರ ನೀಡಲಾಗುವುದು ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ತಿಳಿಸಿದರು.
`ವರದಿ ಬಗ್ಗೆ ಅಧ್ಯಯನ ನಡೆಸಿದ್ದು ಅದರಲ್ಲಿ ಭೂಕಬಳಿಕೆ, ಕೆರೆಗಳ ಒತ್ತುವರಿ ಸೇರಿದಂತೆ ಅನೇಕ ಗಂಭೀರ ವಿಚಾರಗಳಿವೆ. ನಗರದ ಸುತ್ತಮುತ್ತ ಪರಿಸರ ಹಾನಿಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ. ವರದಿಯ ಅನುಷ್ಠಾನದ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು~ ಎಂದರು.
`ಕಾವೇರಿ ವಿವಾದ ನ್ಯಾಯಮಂಡಳಿಯ ಎದುರು ಇರುವುದರಿಂದ ನದಿಯಿಂದ ಮಾತ್ರವೇ ನಗರಕ್ಕೆ ಸಂಪೂರ್ಣ ನೀರು ಪೂರೈಸುವುದು ದೂರದ ಮಾತು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಸವಾಲುಗಳನ್ನು ಎದುರಿಸಲು ಸಿದ್ಧವಿರಬೇಕು. ಈ ಬಗ್ಗೆ ಅರಿವು ಮೂಡಿಸುವುದು ನನ್ನ ಕೆಲಸ, ಉಳಿದದ್ದು ಸರ್ಕಾರಕ್ಕೆ ಬಿಟ್ಟ ವಿಚಾರ. ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ತಜ್ಞರೊಂದಿಗೆ ಸರ್ಕಾರ ಮಾತುಕತೆ ನಡೆಸುವುದು ಒಳಿತು~ ಎಂದು ಅವರು ಹೇಳಿದರು.
ಚಂದ್ರ ಚಿತ್ರ
ನೆಹರು ತಾರಾಲಯದ ಹೊಸ ಪ್ರದರ್ಶನ `ಚಂದ್ರ ಒಂದು ವೈಜ್ಞಾನಿಕ ಚಿತ್ರಣ~ ಚಂದ್ರನ ಉಗಮ ವಿಕಾಸವನ್ನು ದೃಶ್ಯ-ಶ್ರವ್ಯ ಮಾಧ್ಯಮದಲ್ಲಿ ಪ್ರಸ್ತುತ ಪಡಿಸಲಿದೆ. ಜತೆಗೆ ದೇಶದ ಮಹತ್ವಾಕಾಂಕ್ಷೆಯ ಖಗೋಳ ಯೋಜನೆ `ಚಂದ್ರಯಾನ~ದ ಬಗ್ಗೆಯೂ ವಿಶಿಷ್ಟ ಮಾಹಿತಿಗಳಿವೆ. ಸೆಪ್ಟೆಂಬರ್ 14ರಂದು 3.30ಕ್ಕೆ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.
ಚಂದ್ರ ಉಗಮಿಸಿದ ಬಗೆ, ನಕ್ಷತ್ರ ಪುಂಜಗಳ ನಡುವೆ ಆತನ ಚಲನೆ, ಹುಣ್ಣಿಮೆ- ಅಮಾವಾಸ್ಯೆ, ಗ್ರಹಣಗಳು, ಧಾರ್ಮಿಕ ಆಚರಣೆಗಳಲ್ಲಿ, ಕಲ್ಪಿತ ಕಥೆಗಳಲ್ಲಿ ಚಂದ್ರ, ವಿಜ್ಞಾನಿಗಳಾದ ಗೆಲಿಲಿಯೋ, ರಾಬರ್ಟ್ ಹೂಕ್ ಚಂದ್ರನ ಅಧ್ಯಯನಕ್ಕೆ ನೀಡಿದ ಕೊಡುಗೆ, ಆತನ ಆಯಸ್ಕಾಂತೀಯ ಗುಣ ಭೂಮಿಯ ಮೇಲೆ ಉಂಟು ಮಾಡುವ ಪರಿಣಾಮ, ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಅಂಗಳಕ್ಕಿಳಿದದ್ದು... ಹೀಗೆ ಅನೇಕ ಕುತೂಹಲ ಸಂಗತಿಗಳನ್ನು ಪ್ರದರ್ಶನದಿಂದ ಅರಿಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.