ADVERTISEMENT

ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ನೀರಿನ ತೊಟ್ಟಿಗೆ ಬಿದ್ದ ನಾಲ್ಕೂವರೆ ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ದಾರುಣ ಘಟನೆ ಎಚ್‌ಎಸ್‌ಆರ್ ಲೇಔಟ್ ಸಮೀಪದ ದೊಡ್ಡಕನ್ನಹಳ್ಳಿಯ ಜನತಾ ಕಾಲೊನಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕಾರ್ಪೆಂಟರ್ ಮುತ್ತಯ್ಯ ಎಂಬುವರ ಪುತ್ರಿ ಅರ್ಚನಾ ಮೃತಪಟ್ಟ ಬಾಲಕಿ. ಆಕೆ ಸ್ನೇಹಿತರ ಜತೆ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮನೆಯ ಸಮೀಪ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದಳು. ಇದನ್ನು ನೋಡಿದ ಹುಡುಗರು ಜೋರಾಗಿ ಕೂಗಿಕೊಂಡಿದ್ದಾರೆ. ಪೋಷಕರು ಮತ್ತು ಅಕ್ಕಪಕ್ಕದ ಮನೆಯವರು ಬಂದು ಅರ್ಚನಾಳನ್ನು ಗುಂಡಿಯಿಂದ ಮೇಲಕ್ಕೆ ಎತ್ತುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಹಂತದ ಕಟ್ಟಡ ವಿನೋದ್ ಎಂಬುವರಿಗೆ ಸೇರಿದೆ. ಆ ಕಟ್ಟಡದ ಹಿಂಭಾಗ ಮುತ್ತಯ್ಯ ಅವರ ಮನೆಯಿದೆ. ಘಟನೆ ನಡೆದಾಗ ಮುತ್ತಯ್ಯ ಅವರು ಕೆಲಸಕ್ಕೆ ಹೋಗಿದ್ದರು. ಬಾಲಕಿಯ ತಾಯಿ ಲತಾ ಅವರು ಮನೆಯಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲತಾ ಅವರು ಕೇರಳ ಮೂಲದವರು ಮತ್ತು ಮುತ್ತಯ್ಯ ತಮಿಳುನಾಡಿನವರು. ಅವರಿಬ್ಬರು ಪರಸ್ಪರ ಪ್ರೀತಿಸಿ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಲತಾ ದಂಪತಿಯ ಒಬ್ಬಳೇ ಮಗಳಾದ ಅರ್ಚನಾ ಖಾಸಗಿ ಶಾಲೆಯೊಂದರಲ್ಲಿ ಎಲ್‌ಕೆಜಿ ಓದುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.ವಿನೋದ್ ಅವರ ಮೇಲೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲೋಕಾಯುಕ್ತ ಬಲೆಗೆ ಅಧಿಕಾರಿ
ದ್ವಿಚಕ್ರ ವಾಹನ ಗ್ಯಾರೇಜ್‌ಗೆ ವ್ಯಾಪಾರ ಪರವಾನಗಿ ನೀಡಲು ವ್ಯಕ್ತಿಯೊಬ್ಬರಿಂದ 500 ರೂಪಾಯಿ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಮಹದೇವಪುರ ವಲಯದ ಕಿರಿಯ ಆರೋಗ್ಯ ನಿರೀಕ್ಷಕ ನಾರಾಯಣಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ದ್ವಿಚಕ್ರ ವಾಹನ ಗ್ಯಾರೇಜ್ ಹೊಂದಿರುವ ಪ್ರವೀಣ್ ಎಂಬುವರು ವ್ಯಾಪಾರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿ್ದದರು. ಆದರೆ ಪರವಾನಗಿ ನೀಡಲು ಸಾವಿರ ರೂಪಾಯಿ ಲಂಚ ನೀಡುವಂತೆ ಕಿರಿಯ ಆರೋಗ್ಯ ನಿರೀಕ್ಷಕರು ಬೇಡಿಕೆ ಇಟ್ಟಿದ್ದರು. ಬಳಿಕ ನಡೆದ ಮಾತುಕತೆಯಲ್ಲಿ ರೂ 500 ಲಂಚ ನೀಡಿದರೆ ಪರವಾನಗಿ ಮಂಜೂರು ಮಾಡುವುದಾಗಿ ತಿಳಿಸಿದ್ದರು.
 

ಈ ಬಗ್ಗೆ ಅರ್ಜಿದಾರರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಸೋಮವಾರ ನಾರಾಯಣಸ್ವಾಮಿ ತಮ್ಮ ಕಚೇರಿಯಲ್ಲೇ ಪ್ರವೀಣ್ ಅವರಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿ ಅಧಿಕಾರಿಯನ್ನು ಬಂಧಿಸಿದರು. ಪ್ರಾಥಮಿಕ ತನಿಖೆ ಪೂರೈಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT