ADVERTISEMENT

ನೀರಿನ ದರದಲ್ಲಿ ಶೇ 270 ರಷ್ಟು ಏರಿಕೆ

ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೆ ಹೊಡೆತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 20:21 IST
Last Updated 5 ಜುಲೈ 2013, 20:21 IST

ಬೆಂಗಳೂರು: ಬೆಂಗಳೂರು ಜಲಮಂಡಳಿಯು ಕುಡಿಯುವ ನೀರಿನ ದರದಲ್ಲಿ ಶೇ 270ರಷ್ಟು ಏರಿಕೆ ಮಾಡಿ ಬಳಕೆದಾರರಿಗೆ ಆಘಾತ ನೀಡಿದೆ. ಈ ದರ ಸಾಮಾನ್ಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ. ಅಪಾರ್ಟ್‌ಮೆಂಟ್‌ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಸತಿಗೃಹಗಳು, ವಿಲ್ಲಾಗಳಿಗೆ ಈ ದರ ಅನ್ವಯವಾಗಿದೆ. ಹೊಸ ದರ ಜುಲೈಯಿಂದಲೇ ಜಾರಿಗೆ ಬಂದಿದೆ.

ದರ ಏರಿಕೆಯ ಬಗ್ಗೆ ಜಲಮಂಡಳಿಯು ಜೂನ್ 13ರಂದು ಸುತ್ತೋಲೆ ಹೊರಡಿಸಿತ್ತು. ನೀರಿನ ದರದಲ್ಲಿ ಏರಿಕೆ ಆಗಿರುವುದನ್ನು ಮಂಡಳಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೇ ಅಂತ್ಯದಲ್ಲಿ ರಾಜ್ಯ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತ್ತು. ಎಲ್ಲ ಬಗೆಯ ಬಳಕೆದಾರರ ನೀರಿನ ದರ ಏರಿಕೆ ಬಗ್ಗೆ ಮಂಡಳಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಈ ವರೆಗೆ ಅನುಮತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗ ಕಿಲೋ ಲೀಟರ್‌ಗೆ (ಕೆಎಲ್- ಸಾವಿರ ಲೀಟರ್) ರೂ 19 ಎಂದು ನಿಗದಿಪಡಿಸಲಾಗಿದೆ. ಈ ಹಿಂದೆ 0-8000 ಲೀಟರ್ ವರೆಗೆ ಕಿಲೋಲೀಟರ್‌ಗೆ ರೂ 6, 8001ರಿಂದ 25,000 ಲೀಟರ್‌ವರೆಗೆ ರೂ 9, 25,001ರಿಂದ 50,000 ಲೀಟರ್‌ವರೆಗೆ ರೂ 15 , 75,000 ಲೀಟರ್‌ವರೆಗೆ ರೂ 30, ಒಂದು ಲಕ್ಷ ಲೀಟರ್‌ವರೆಗೆ ರೂ 36 ಇತ್ತು.

ಈಗಿನ ದರ ಹೆಚ್ಚಳವು ಅಧಿಕ ಅಪಾರ್ಟ್‌ಮೆಂಟ್‌ಗಳನ್ನು ಹಾಗೂ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವವರಿಗೆ ಲಾಭ ಉಂಟು ಮಾಡುವಂತಹುದು. ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಈ ದರ ತುಟ್ಟಿಯಾಗಿದೆ ಎಂದು ಬಳಕೆದಾರರು ದೂರಿದ್ದಾರೆ.

`ನಾನು ಕಾಕ್ಸ್ ಟೌನ್‌ನಲ್ಲಿ 10 ಫ್ಲಾಟ್‌ಗಳಿರುವ ಅಪಾರ್ಟ್‌ಮೆಂಟಿನಲ್ಲಿ ವಾಸಿಸುತ್ತಿದ್ದೇನೆ. ಜೂನ್‌ನಲ್ಲಿ ನೀರಿನ ಬಿಲ್ 1,730 ಬಂದಿತ್ತು. ಜುಲೈ ಮೊದಲನೇ ವಾರದಲ್ಲಿ ರೂ 4,687 ಬಿಲ್ ಬಂದಿತ್ತು. ಶೇ 270ರಷ್ಟು ದರ ಹೆಚ್ಚಳವಾಗಿದೆ. ಕೊಳವೆಬಾವಿಗಳ ದರದಲ್ಲೂ ಹೆಚ್ಚಳ ಆಗಿದೆ. ಇದು ಬಳಕೆದಾರರಿಗೆ ದೊಡ್ಡ ಹೊಡೆತ' ಎಂದು ಅಪಾರ್ಟ್‌ಮೆಂಟ್ ನಿವಾಸಿ ದಿಲೀಪ್ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.