ADVERTISEMENT

ಪರಿಶಿಷ್ಟ ನೇಕಾರರಿಗೆ ಮನೆ ನಿರ್ಮಾಣಕ್ಕೆ ಲಕ್ಷ ಅನುದಾನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:10 IST
Last Updated 21 ಏಪ್ರಿಲ್ 2012, 19:10 IST

ಹೊಸಕೋಟೆ: ಕೈಮಗ್ಗ ಮತ್ತು ಜವಳಿ ಇಲಾಖೆ ವಸತಿಯು ಕಾರ್ಯಾಗಾರ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೇಕಾರರಿಗೆ ವಸತಿ ನಿರ್ಮಿಸಿಕೊಳ್ಳುವಲ್ಲಿ ಪ್ರಥಮ ಬಾರಿಗೆ ಒಂದು ಲಕ್ಷ ರೂಪಾಯಿಗಳ ಅನುದಾನ ನೀಡುತ್ತಿದೆ ಎಂದು ಇಲಾಖೆಯ ಉಪ ನಿರ್ದೇಶಕ ಎಸ್.ಪ್ರಕಾಶ್ ಹೇಳಿದರು.

ಅಖಿಲ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ, ಚೌಡೇಶ್ವರಿ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರ ಸಹಕಾರ ಸಂಘ ಹಾಗು ಜವಳಿ ಮತ್ತು ಕೈಮಗ್ಗ ಇಲಾಖೆ ಅಶ್ರಯದಲ್ಲಿ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ನೇಕಾರರ 5,417 ಮಕ್ಕಳಿಗೆ 86 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗಿದ್ದು, ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ.

ನೇಕಾರರಿಗೆ ಆರೋಗ್ಯ ವಿಮಾ ಯೋಜನೆ, ಕ್ರೆಡಿಟ್ ಕಾರ್ಡ್ ಯೋಜನೆ ಸೇರಿದಂತೆ ಅವರಿಗೆ ಸಹಾಯ ಮಾಡುವಲ್ಲಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ನೇಕಾರರು ಅವುಗಳ ಪ್ರಯೋಜನ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ಮಾಡಿದರು.

ಅಖಿಲ ಕರ್ನಾಟಕ ನೇಕಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಚೌಡಪ್ಪ ಮಾತನಾಡಿ, ನೇಕಾರರ ಅನುಕೂಲಕ್ಕಾಗಿ ಹೊಸಕೋಟೆಯಲ್ಲಿ ನೇಕಾರರ ಬ್ಯಾಂಕ್ ಸ್ಥಾಪಿಸಲು, ಮಾರಾಟ ಮಳಿಗೆ ನಿರ್ಮಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ತಪಸೀಹಳ್ಳಿಯ ದಿವ್ಯ ಜ್ಞಾನಾನಂದಗಿರಿ ಸ್ವಾಮಿ, ನೇಕಾರರು ತಪ್ಪದೆ ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವಂತಾಬೇಕು ಎಂದು ಹೇಳಿದರು.

ಸಹಾಯಕ ನಿರ್ದೇಶಕ ಆರ್.ಲಿಂಗರಾಜು ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆ ಕಾರ್ಯದರ್ಶಿ ಪ್ರಕಾಶ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.